
ನವದೆಹಲಿ: ಉನ್ನಾವೊ ಅತ್ಯಾಚಾರ ಪ್ರಕರಣದ ಆಗಿನ ತನಿಖಾಧಿಕಾರಿಯ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಸಂತ್ರಸ್ತೆಯು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ದೂರು ನೀಡಿದ್ದಾರೆ. ಪ್ರಕರಣದ ಅಪರಾಧಿಯಾಗಿರುವ ಬಿಜೆಪಿಯ ಮಾಜಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ಅವರೊಂದಿಗೆ ತನಿಖಾಧಿಕಾರಿ ಕೈ ಜೋಡಿಸಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.
ನನಗೆ ಮತ್ತು ನನ್ನ ಕುಟುಂಬಕ್ಕೆ ಹಲವು ಕಡೆಯಿಂದ ಬೆದರಿಕೆಗಳು ಬರುತ್ತಿವೆ ಎಂದು ಸಂತ್ರಸ್ತೆ ಹೇಳಿದ್ದಾರೆ.
‘ತನಿಖಾಧಿಕಾರಿಯು ಅಪ್ರಾಮಾಣಿಕ ಮತ್ತು ದುರುದ್ದೇಶಪೂರಿತವಾಗಿ ತನಿಖೆ ನಡೆಸಿದ್ದಾರೆ. ಕುಲದೀಪ್ ಹಾಗೂ ಇತರ ಆರೋಪಿಗಳೊಂದಿಗೆ ಕೈ ಜೋಡಿಸಿ, ಅವರಿಗೆ ಅನುಕೂಲವಾಗುವ ರೀತಿ ತನಿಖೆಯ ಫಲಿತಾಂಶ ಬರುವಂತೆ ಮಾಡಲಾಗಿದೆ. ಆರೋಪಪಟ್ಟಿಯಲ್ಲಿ ನಕಲಿ ದಾಖಲೆಗಳನ್ನು ಬಳಸಲಾಗಿದೆ. ನನ್ನ ಜನ್ಮ ದಿನಾಂಕವನ್ನು ತಪ್ಪಾಗಿ ನಮೂದಿಸಲಾಗಿದೆ. ಅಲ್ಲದೇ ನಾನು ಹೋಗದೇ ಇರುವ ಶಾಲೆಯಲ್ಲಿ ವ್ಯಾಸಂಗ ಮಾಡಿರುವುದಾಗಿ ನಕಲಿ ಪ್ರಮಾಣಪತ್ರ ಸೃಷ್ಟಿಸಲಾಗಿದೆ’ ಎಂದು ಆರೋಪಿಸಿ ಒಟ್ಟು 6 ಪುಟಗಳ ದೂರು ನೀಡಿದ್ದಾರೆ.
2017ರಲ್ಲಿ ನಡೆದಿದ್ದ ಪ್ರಕರಣದಲ್ಲಿ ಅಪರಾಧಿ ಕುಲದೀಪ್ ಅವರಿಗೆ ವಿಧಿಸಲಾಗಿದ್ದ ಜೀವಾವಧಿ ಶಿಕ್ಷೆಯನ್ನು ದೆಹಲಿ ಹೈಕೋರ್ಟ್ ಅಮಾನತುಗೊಳಿಸಿ, ಷರತ್ತುಬದ್ಧ ಜಾಮೀನು ನೀಡಿದೆ. ಇದರ ವಿರುದ್ಧ ಹಲವೆಡೆ ಆಕ್ರೋಶ ವ್ಯಕ್ತವಾಗುತ್ತಿದೆ.
ಸಂತ್ರಸ್ತೆ ತಂದೆಯ ಕಸ್ಟಡಿ ಸಾವಿನ ಪ್ರಕರಣದಲ್ಲಿ ಕುಲದೀಪ್‌ಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿರುವ ಕಾರಣ ಅವರು ಜೈಲಿನಲ್ಲೇ ಇರುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.