ADVERTISEMENT

ಯೋಜಿತವಲ್ಲದ ಲಾಕ್‌ಡೌನ್‌ನಿಂದ 21 ದಿನಗಳಲ್ಲಿ ಯುದ್ಧ ಗೆಲ್ಲಲು ಆಗಲಿಲ್ಲ: ರಾಹುಲ್‌

ಪಿಟಿಐ
Published 19 ಡಿಸೆಂಬರ್ 2020, 9:40 IST
Last Updated 19 ಡಿಸೆಂಬರ್ 2020, 9:40 IST
ರಾಹುಲ್‌ ಗಾಂಧಿ
ರಾಹುಲ್‌ ಗಾಂಧಿ   

ನವದೆಹಲಿ: ‘ದೇಶದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆಶನಿವಾರ ಒಂದು ಕೋಟಿ ಗಡಿ ದಾಟಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಯೋಜಿತವಲ್ಲದ ಲಾಕ್‌ಡೌನ್ ಫಲಿಸಲಿಲ್ಲ. ಬದಲಿಗೆ ಅದು ಲಕ್ಷಾಂತರ ಜನರ ಜೀವನವನ್ನು ನಾಶಪಡಿಸಿತು’ ಎಂದು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಶನಿವಾರ ಆರೋಪಿಸಿದ್ದಾರೆ.

‘ಮಹಾಭಾರತದಲ್ಲಿ ಯುದ್ಧವನ್ನು 18 ದಿನಗಳಲ್ಲಿ ಗೆಲ್ಲಲಾಗಿತ್ತು. ಕೊರೊನಾ ವೈರಸ್‌ ವಿರುದ್ಧದ ಯುದ್ಧವನ್ನು ಗೆಲ್ಲಲು 21 ದಿನಗಳು ಬೇಕು’ ಎಂದು ಮಾರ್ಚ್‌ನಲ್ಲಿ ಪ್ರಧಾನಿ ಅವರು ನೀಡಿದ್ದ ಹೇಳಿಕೆಯನ್ನು ಟೀಕಿಸಿ ಅವರು ಟ್ವೀಟ್‌ ಮಾಡಿದ್ದಾರೆ.

‘ಸುಮಾರು 1.5 ಲಕ್ಷ ಜನರು ಕೋವಿಡ್‌ನಿಂದಾಗಿ ಸಾವನ್ನಪ್ಪಿದ್ದು, 1 ಕೋಟಿ ಜನರಲ್ಲಿ ಕೋವಿಡ್ ದೃಢ‍ಪಟ್ಟಿದೆ. ನಿಮ್ಮ ಯೋಜಿತವಲ್ಲದ ಲಾಕ್‌ಡೌನ್‌ನಿಂದಾಗಿ 21 ದಿನಗಳಲ್ಲಿ ಯುದ್ಧವನ್ನು ಗೆಲ್ಲಲು ಆಗಲಿಲ್ಲ. ಆದರೆ, ಇದು ಖಂಡಿತವಾಗಿಯೂ ದೇಶದ ಲಕ್ಷಾಂತರ ಜೀವನಕ್ಕೆ ಎರವಾಗಿದೆ’ ಎಂದು ಅವರು ದೂರಿದ್ದಾರೆ.

ADVERTISEMENT

‌ದೇಶದಲ್ಲಿ ಕೋವಿಡ್‌ ಪ್ರಕರಣಗಳು ಆಗಸ್ಟ್ 7ರ ವೇಳೆಗೆ 20 ಲಕ್ಷ ದಾಟಿತ್ತು. ಆಗಸ್ಟ್ 23ಕ್ಕೆ ಅದು 30 ಲಕ್ಷ ಮತ್ತು ಸೆಪ್ಟೆಂಬರ್ 5ಕ್ಕೆ 40 ಲಕ್ಷ, ಸೆಪ್ಟೆಂಬರ್ 16ಕ್ಕೆ 50 ಲಕ್ಷ ಗಡಿ ದಾಟಿತ್ತು. ಸೆ. 28ರವೇಳೆಗೆ 60 ಲಕ್ಷ, ಅಕ್ಟೋಬರ್ 11ಕ್ಕೆ 70 ಲಕ್ಷ, ಅ. 29ಕ್ಕೆ 80 ಲಕ್ಷ ಮತ್ತು ನವೆಂಬರ್ 20ರವೇಳೆಗೆ 90 ಲಕ್ಷ ದಾಟಿತ್ತು ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ತಿಳಿಸಿವೆ.

ಶನಿವಾರ ಬೆಳಿಗ್ಗೆಯ ಮಾಹಿತಿ ಪ್ರಕಾರ ದೇಶದಲ್ಲಿ ಕೋವಿಡ್‌ ಪೀಡಿತರ ಸಂಖ್ಯೆ 1 ಕೋಟಿ ದಾಟಿದೆ. ಮೃತಪಟ್ಟವರ ಸಂಖ್ಯೆ 1,45,136 ಇದೆ. ಒಂದು ತಿಂಗಳಲ್ಲಿ 10 ಲಕ್ಷ ಕೋವಿಡ್‌ ಪ್ರಕರಣಗಳು ಹೆಚ್ಚಾಗಿವೆ. ಒಟ್ಟು ಗುಣಮುಖರಾದವರ ಸಂಖ್ಯೆ 95.50 ಲಕ್ಷಕ್ಕೆ ಏರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.