ADVERTISEMENT

ಉತ್ತರ ಪ್ರದೇಶ: ಎಸ್‌.ಪಿ ನಾಯಕನ ಪುತ್ರಿ ಜತೆ ಬಿಜೆಪಿ ನಾಯಕ ಪರಾರಿ

​ಪ್ರಜಾವಾಣಿ ವಾರ್ತೆ
Published 18 ಜನವರಿ 2023, 14:25 IST
Last Updated 18 ಜನವರಿ 2023, 14:25 IST
   

ಲಖನೌ: ಇಬ್ಬರು ಮಕ್ಕಳ ತಂದೆಯಾಗಿರುವ ಬಿಜೆಪಿಯ ನಾಯಕರೊಬ್ಬರು ಸಮಾಜವಾದಿ ಪಕ್ಷದ ನಾಯಕರೊಬ್ಬರ ಮಗಳೊಂದಿಗೆ ಓಡಿ ಹೋಗಿರುವ ಪ್ರಕರಣ ಉತ್ತರ ಪ್ರದೇಶದ ಹರ್ದೋಯಿ ನಗರದಲ್ಲಿ ನಡೆದಿದೆ.

ಹರ್ದೋಯಿ ನಗರ ಬಿಜೆಪಿ ಘಟಕದ ಪ್ರಧಾನ ಕಾರ್ಯದರ್ಶಿ ಆಶಿಶ್‌ ಶುಕ್ಲಾ (45) ಈ ಪ್ರಕರಣದ ಆರೋಪಿ. ಯುವತಿಯ ತಂದೆ ದಾಖಲಿಸಿದ ಎಫ್‌ಐಆರ್‌ ಆಧರಿಸಿ, ತನಿಖೆ ಕೈಗೊಂಡಿರುವುದಾಗಿ ಇಲ್ಲಿನ ಪೊಲೀಸರು ಬುಧವಾರ ತಿಳಿಸಿದ್ದಾರೆ.

‘ಈ ವಿಷಯವನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿದ್ದು, ಶುಕ್ಲಾ ಅವರನ್ನು ಪಕ್ಷದಿಂದ ಉಚ್ಚಾಟಿಸಿದೆ’ ಎಂದು ಬಿಜೆಪಿಯ ಸ್ಥಳೀಯ ಮಾಧ್ಯಮ ಉಸ್ತುವಾರಿ ಗಂಗೇಶ್ ಪಾಠಕ್ ಹೇಳಿದ್ದಾರೆ.

ADVERTISEMENT

‘ಶುಕ್ಲಾ ಅವರು ಕೆಲ ವರ್ಷಗಳಿಂದ ಎಸ್‌.ಪಿ ನಾಯಕರೊಬ್ಬರ ಪುತ್ರಿಯೊಂದಿಗೆ ಸಂಬಂಧ ಹೊಂದಿದ್ದರು. ಇಬ್ಬರೂ ಕೆಲ ದಿನಗಳ ಹಿಂದೆಯೇ ಓಡಿ ಹೋಗಿದ್ದಾರೆ. ಅದು ಬುಧವಾರ ಬಹಿರಂಗವಾಗಿದೆ’ ಎಂದು ಮೂಲಗಳು ತಿಳಿಸಿವೆ.

ವಿವಾಹಿತ ಶುಕ್ಲಾ ಅವರಿಗೆ 21 ವರ್ಷದ ಪುತ್ರ ಮತ್ತು ಏಳು ವರ್ಷದ ಪುತ್ರಿಯಿದ್ದಾರೆ.

‘ಕೇಸರಿ ಪಕ್ಷದ ಆಡಳಿತದಲ್ಲಿ ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲದಂತಾಗಿದೆ. ಬಿಜೆಪಿಯ ಬೇಟಿ ಬಜಾವೊ ಘೋಷಣೆಯು ಕೇವಲ ಕಣ್ಣೊರೆಸುವ ತಂತ್ರ’ ಎಂದು ಸ್ಥಳೀಯ ಎಸ್‌.ಪಿ ಮುಖಂಡರು ಆರೋಪಿಸಿದ್ದಾರೆ.

‘ಬಿಜೆಪಿ ನಾಯಕ ಶುಕ್ಲಾ ಅವರನ್ನು ಬಂಧಿಸದಿದ್ದರೆ ರಸ್ತೆಗಿಳಿದು ಪ್ರತಿಭಟನೆ ನಡೆಸುತ್ತೇವೆ’ ಎಂದು ಹರ್ದೋಯಿ ನಗರದ ಸ್ಥಳೀಯ ಎಸ್‌.ಪಿ ನಾಯಕ ಜಿತೇಂದ್ರ ವರ್ಮಾ ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.