ಬಲ್ಲಿಯಾ (ಉತ್ತರ ಪ್ರದೇಶ): ಕೋಳಿ ಕೊಂದಿದ್ದಕ್ಕೆ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿರುವ ಘಟನೆ ಉತ್ತರ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ.
ಭೂ ವಿವಾದದ ಹಿನ್ನೆಲೆಯಲ್ಲಿ ಕೋಳಿಯನ್ನು ಇಟ್ಟಿಗೆ ಮತ್ತು ಕಲ್ಲುಗಳಿಂದ ಕೊಂದು, ಆ ಕೋಳಿ ಮಾಲೀಕರು ಪ್ರತಿಭಟಿಸಿದಾಗ ಅವರನ್ನು ಥಳಿಸಲಾಗಿದ್ದು, ಈ ಸಂಬಂಧ ಉತ್ತರ ಪ್ರದೇಶ ಬಲ್ಲಿಯಾ ಜಿಲ್ಲೆಯ ಪಕ್ಡಿ ಪ್ರದೇಶದಲ್ಲಿ ಇಬ್ಬರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಮಾರ್ಚ್ 21ರಂದು ಪಕ್ಡಿ ಪೊಲೀಸ್ ಠಾಣೆ ವ್ಯಾಪ್ತಿಯ ಗರ್ಹ್ಮಲ್‌ಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕೋಳಿಯ ಮಾಲೀಕರಾದ ಆರತಿ ದೇವಿ ಅವರು ಕೋಳಿಯನ್ನು ಕೊಂದ ಬಗ್ಗೆ ಆರೋಪಿಗಳಿಂದ ವಿವರಣೆ ಕೇಳಿದಾಗ, ಅವರು ಆಕೆಯನ್ನು ಸಹ ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಆರತಿ ದೇವಿ ಅವರ ದೂರಿನ ಆಧಾರದ ಮೇಲೆ, ಸೂರಜ್ ರಾಮ್ ಮತ್ತು ಶೀಲಾ ದೇವಿ ವಿರುದ್ಧ ಬಿಎನ್‌ಎಸ್ ಸೆಕ್ಷನ್ 325 (ಪ್ರಾಣಿಯನ್ನು ಕೊಲ್ಲುವುದು), 115-2 (ಉದ್ದೇಶಪೂರ್ವಕವಾಗಿ ನೋವುಂಟು ಮಾಡುವುದು), 352 (ಶಾಂತಿ ಕದಡುವ ಉದ್ದೇಶದಿಂದ ಉದ್ದೇಶಪೂರ್ವಕವಾಗಿ ಅವಮಾನಿಸುವುದು) ಮತ್ತು 351-3 (ಯಾವುದೇ ವ್ಯಕ್ತಿಗೆ ಕೊಲ್ಲುವ ಅಥವಾ ಗಂಭೀರ ಹಾನಿ ಉಂಟುಮಾಡುವ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಕುಮಾರ್ ಝಾ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.