ಲಖನೌ: ಬರೇಲಿಯಲ್ಲಿ ಶುಕ್ರವಾರ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ‘ಐ ಲವ್ ಮಹಮದ್’ ಪ್ರದರ್ಶನ ಜಾಥಾ ಆಯೋಜಿಸಿದ್ದ ಸ್ಥಳೀಯ ಧರ್ಮಗುರು ಮೌಲಾನಾ ತೌಕೀರ್ ರಜಾ ಖಾನ್ ಸೇರಿ 8 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಸಿ.ಸಿ.ಟಿ.ವಿ. ದೃಶ್ಯಗಳನ್ನು ಆಧರಿಸಿ ಹಿಂಸಾಚಾರದಲ್ಲಿ ಭಾಗಿಯಾದ 39 ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.
ಸಾಮಾಜಿಕ ಜಾಲತಾಣಗಳ ಮೂಲಕ ಕೋಮು ಸಂಘರ್ಷದ ಕಿಡಿ ವ್ಯಾಪಿಸುವುದನ್ನು ತಡೆಯಲು ಬರೇಲಿ ಮತ್ತು ಸುತ್ತಲಿನ ಜಿಲ್ಲೆಗಳಲ್ಲಿ 48 ಗಂಟೆ ಇಂಟರ್ನೆಟ್ ಸಂಪರ್ಕ ಸ್ಥಗಿತಗೊಳಿಸಲಾಗಿದೆ. ಪೊಲೀಸರು ಅರೆಸೇನಾ ಪಡೆ ಸೇರಿ 8 ಸಾವಿರ ಸಿಬ್ಬಂದಿ ಭದ್ರತೆಗೆ ನಿಯೋಜನೆಗೊಂಡಿದ್ದಾರೆ.
ಪ್ರಮುಖ ಆರೋಪಿಗಳಾದ ಇತ್ತೇಹಾದ್–ಎ–ಮಿಲತ್ ಕೌನ್ಸಿಲ್‌ನ ತೌಕೀರ್ ರಜಾ ಖಾನ್, ಸರ್ಫರಾಜ್ ಮನಿಫುದ್ದೀನ್, ಅಜೀಂ ಅಹಮದ್, ಮಹಮದ್ ಷರೀಫ್, ಮಹಮದ್ ಅಮೀರ್, ರೆಹಾನ್, ಮಹಮದ್ ಸರ್ಫರಾಜ್‌ನನ್ನು ಶುಕ್ರವಾರ ರಾತ್ರಿಯೇ ಬಂಧಿಸಿದ ಪೊಲೀಸರು, ಶನಿವಾರ ಬೆಳಿಗ್ಗೆ ಅವರನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ನ್ಯಾಯಾಲಯ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿದೆ.
ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಇದುವರೆಗೆ ವಿವಿಧ ಠಾಣೆಗಳಲ್ಲಿ ಒಟ್ಟು 10 ಪ್ರಕರಣಗಳು ದಾಖಲಾಗಿವೆ. ಘಟನೆಯಲ್ಲಿ 22 ಪೊಲೀಸರು ಗಾಯಗೊಂಡಿದ್ದಾರೆ. ಇಲ್ಲಿನ ಇಸ್ಲಾಮಿಯಾ ಕ್ಯಾಂಪಸ್‌ನಿಂದ ಜೀವಂತ ಕಾಟ್ರಿಜ್‌ಗಳು, ದೇಸಿ ನಿರ್ಮಿತ ಪಿಸ್ತೂಲ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸದ್ಯ ಬರೇಲಿಯಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸುತ್ತಮುತ್ತಲಿನ ಜಿಲ್ಲೆಗಳಲ್ಲೂ ನಿಗಾ:
ಬರೇಲಿ, ಬಾರಾಬಂಕಿ, ಮವೂ ಜಿಲ್ಲೆಗಳಲ್ಲಿ ಉದ್ವಿಗ್ನತೆ ಮುಂದುವರಿದಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ. ಸಾಮಾಜಿಕ ಜಾಲತಾಣಗಳ ಮೇಲೂ ನಿಗಾ ವಹಿಸಲಾಗಿದೆ.
ಬಾರಾಬಂಕಿ ಜಿಲ್ಲೆಯ ಫೈಜುಲ್ಲಾಗಂಜ್ ಗ್ರಾಮ ಮತ್ತು ಲಖನೌದಲ್ಲಿ ‘ಐ ಲವ್ ಮಹಮದ್’ ಅಭಿಯಾನದ ಅಂಗವಾಗಿ ಅಳವಡಿಸಲಾಗಿದ್ದ ಪೋಸ್ಟರ್ ಹರಿದು ಹಾಕಲಾಗಿದೆ.
‘ಯಾರ ಆಡಳಿತ ಎನ್ನವುದನ್ನು ಮೌಲಾನಾ ಮರೆತಿದ್ದಾನೆ’
ಬರೇಲಿಯಲ್ಲಿ ಶುಕ್ರವಾರ ನಡೆದ ಹಿಂಸಾಚಾರವನ್ನು ಖಂಡಿಸಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ‘ಬೀದಿಗಿಳಿದು ಪ್ರತಿಭಟನೆ ನಡೆಸುವ ಮೂಲಕ ಯಾರೂ ವ್ಯವಸ್ಥೆಯನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳಲು ಸಾಧ್ಯವಿಲ್ಲ’ ಎಂದು ಎಚ್ಚರಿಕೆ ನೀಡಿದ್ದಾರೆ. ‘ಕಾನೂನು ಸುವ್ಯವಸ್ಥೆಗೆ ಅಡ್ಡಿಪಡಿಸುವುದನ್ನು ಸರ್ಕಾರ ಸಹಿಸುವುದಿಲ್ಲ. ಪ್ರತಿಭಟನೆ ಹೆಸರಿನಲ್ಲಿ ಹಿಂಸಾಚಾರಕ್ಕೆ ಇಳಿಯುವ ಮುನ್ನ ಭವಿಷ್ಯದ ತಲೆಮಾರು ಎರಡು ಬಾರಿ ಯೋಚಿಸಬೇಕು’ ಎಂದು ಅವರು ಹೇಳಿದ್ದಾರೆ.
ರಾಜಕೀಯವಾಗಿ ಸಕ್ರಿಯ
ಇತ್ತೇಹಾದ್–ಎ–ಮಿಲತ್ ಕೌನ್ಸಿಲ್ ಕಳೆದ ಎರಡು ದಶಕಗಳಿಂದ ರಾಜಕೀಯವಾಗಿ ಸಕ್ರಿಯವಾಗಿದೆ. ಬರೇಲಿ ಮತ್ತು ಸಮೀಪದ ಜಿಲ್ಲೆಗಳಲ್ಲಿ ಪ್ರಭಾವ ಹೊಂದಿದೆ. ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ವಿರೋಧಿಸಿ 2019–20ರಲ್ಲಿ ನಡೆದ ಪ್ರತಿಭಟನೆಯಲ್ಲೂ ರಜಾ ಖಾನ್ ಪ್ರಚೋದನಕಾರಿ ಭಾಷಣದ ಮೂಲಕ ಕೋಮು ಅಶಾಂತಿ ಸೃಷ್ಟಿಸಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ರಜಾ ಖಾನ್‌ನ ಪ್ರಚೋದನಕಾರಿ ಭಾಷಣದಿಂದ ಹಿಂಸಾಚಾರ ಭುಗಿಲೆದ್ದಿತು. ಆರೋಪಿಯನ್ನು ಶುಕ್ರವಾರ ರಾತ್ರಿಯೇ ಬಂಧಿಸಲಾಗಿದೆ.– ಅನುರಾಗ್ ಆರ್ಯ, ಪೊಲೀಸ್ ವರಿಷ್ಠಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.