
ಲಖನೌ: ಪ್ರಕರಣದ ಆರೋಪಿಗಳ ಪಟ್ಟಿಯಿಂದ ಹೆಸರನ್ನು ತೆಗೆದುಹಾಕಿದ್ದಕ್ಕಾಗಿ ಉತ್ತರ ಪ್ರದೇಶದ ಪೊಲೀಸರು ವ್ಯಾಪಾರಿಯೊಬ್ಬರಿಂದ ನಗದಿನ ಬದಲಾಗಿ ನಾಲ್ಕು ಜೋಡಿ ಶೂಗಳನ್ನು ಲಂಚವಾಗಿ ಪಡೆದಿದ್ದಾರೆ.
ರಾಜ್ಯದ ಆಗ್ರಾ ನಗರದಲ್ಲಿ ಪೊಲೀಸರು ವ್ಯಾಪಾರಿಯೊಬ್ಬರ ವಿರುದ್ಧದ ಪ್ರಕರಣದ ತನಿಖೆ ನಡೆಸುತ್ತಿದ್ದರು. ಅದರ ಭಾಗವಾಗಿ ವ್ಯಾಪಾರಿಯ ಹೇಳಿಕೆಯನ್ನು ದಾಖಲಿಸಿ ಹಿರಿಯ ಅಧಿಕಾರಿಗಳಿಗೆ ವರದಿಯನ್ನು ಸಲ್ಲಿಸಬೇಕಿತ್ತು. ಆದರೆ, ಪೊಲೀಸರು ವ್ಯಾಪಾರಿಯನ್ನು ಸಂಪರ್ಕಿಸಿ, ಅವರ ಪರವಾಗಿ ವರದಿ ಬರೆಯಲು ಲಂಚವಾಗಿ ಹಣ ಕೇಳಿದ್ದರು.
ಆದರೆ ವ್ಯಾಪಾರಿಯು, ‘ಹಣ ನೀಡಲು ಸಾಧ್ಯವಿಲ್ಲ’ ಎಂದಾಗ, ನಾಲ್ಕು ಜೋಡಿ ಶೂಗಳನ್ನು ನೀಡುವಂತೆ ಪೊಲೀಸರು ಒತ್ತಾಯಿಸಿದ್ದಾರೆ. ಹಾಗಾಗಿ ವ್ಯಾಪಾರಿಯು ಅವರಿಗೆ ಶೂಗಳನ್ನು ನೀಡಿದ್ದರು ಎನ್ನಲಾಗಿದೆ. ಭ್ರಷ್ಟಾಚಾರ ವಿರೋಧಿ ಸಹಾಯವಾಣಿ ಸಂಖ್ಯೆಗೆ ದೂರು ಸಲ್ಲಿಸಿದ ನಂತರ ಮೂವರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ವರದಿಗಳ ಪ್ರಕಾರ, ಆಗ್ರಾದಲ್ಲಿ ಅಧಿಕಾರಿಗಳು ಪ್ರಾರಂಭಿಸಿರುವ ‘ಭ್ರಷ್ಟಾಚಾರ ವಿರೋಧಿ’ ಸಹಾಯವಾಣಿಗೆ ಪೊಲೀಸ್ ಸಿಬ್ಬಂದಿ ವಿರುದ್ಧ ‘ಸುಲಿಗೆ’ಗೆ ಆರೋಪಕ್ಕೆ ಸಂಬಂಧಿಸಿದ ದೂರುಗಳ ಮಹಾಪೂರವೇ ಹರಿದುಬರುತ್ತಿವೆ.
‘ಲಂಚ ನೀಡದಿದ್ದರೆ, ಗ್ಯಾಂಗ್‌ಸ್ಟರ್ ಕಾಯ್ದೆ ಸೇರಿದಂತೆ ಸುಳ್ಳು ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಸುತ್ತಿದ್ದಾರೆ’ ಎಂದು ಜನರು ದೂರಿದ್ದಾರೆ. ಇದೇ ರೀತಿಯ ಪ್ರಕರಣವೊಂರಲ್ಲಿ ಇತ್ತೀಚೆಗೆ ಪೊಲೀಸ್ ಕಾನ್ಸ್‌ಸ್ಟೆಬಲ್ ಒಬ್ಬರನ್ನು ಅಮಾನತು ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.