ADVERTISEMENT

1998ರ ‘ನಕಲಿ’ ಎನ್‌ಕೌಂಟರ್‌: 36 ಆರೋಪಿಗಳು ಖುಲಾಸೆ

ಪಿಟಿಐ
Published 2 ಏಪ್ರಿಲ್ 2023, 15:49 IST
Last Updated 2 ಏಪ್ರಿಲ್ 2023, 15:49 IST
   

ಭದೋಹಿ, ಉತ್ತರ ಪ್ರದೇಶ: ನಾಲ್ಕು ಜನರ ಎನ್‌ಕೌಂಟರ್‌ಗೆ ಸಂಬಂಧಿಸಿದ 25 ವರ್ಷಗಳ ಹಿಂದಿನ ಪ್ರಕರಣದಲ್ಲಿ ಇಲ್ಲಿನ ಜಿಲ್ಲಾ ನ್ಯಾಯಾಲಯ 34 ಪೊಲೀಸ್ ಸಿಬ್ಬಂದಿ ಸೇರಿದಂತೆ 36 ಮಂದಿಯನ್ನು ಖುಲಾಸೆಗೊಳಿಸಿದೆ.

ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಶೈಲೋಜ್ ಚಂದ್ರ ಅವರು ಶುಕ್ರವಾರ 36 ಜನರನ್ನು ಖುಲಾಸೆಗೊಳಿಸಿದರು.

ಈ ಬಗ್ಗೆ ಮಾಹಿತಿ ನೀಡಿದ ಹೆಚ್ಚುವರಿ ಜಿಲ್ಲಾ ಸರ್ಕಾರಿ ವಕೀಲ (ಎಡಿಜಿಸಿ) ವಿಕಾಸ್ ನಾರಾಯಣ್ ಸಿಂಗ್, ‘1998 ರ ಅಕ್ಟೋಬರ್‌ನಲ್ಲಿ ದರೋಡೆ ಮಾಡಲು ಸರೋಯ್‌ ಪೆಟ್ರೋಲ್‌ ಪಂಪ್‌ಗೆ ಹೋಗಿದ್ದ ಕ್ರಿಮಿನಲ್‌ ಧನಂಜಯ್ ಸಿಂಗ್ ಸೇರಿದಂತೆ ನಾಲ್ವರನ್ನು ಗುಂಡಿಕ್ಕಿ ಕೊಲ್ಲಲಾಯಿತು ಎಂದು ಪೊಲೀಸರು ಹೇಳಿದ್ದರು’ ಎಂದರು.

ADVERTISEMENT

ಧನಂಜಯ್ ಸಿಂಗ್ ಈಗ ಜನತಾದಳ (ಸಂಯುಕ್ತ) ನಾಯಕರಾಗಿದ್ದಾರೆ.

‘ಈ ಘಟನೆ ಖಂಡಿಸಿ ಸಮಾಜವಾದಿ ಪಕ್ಷದ ಮುಖಂಡರಾದ ದಿವಂಗತ ಅಮರ್ ಸಿಂಗ್ ಮತ್ತು ‍‍ಫೂಲನ್ ದೇವಿ, ಮಾಜಿ ಎಸ್‌ಪಿ ಮುಖಂಡ ಅಹ್ಮದ್ ಹಸನ್ ಮತ್ತು ಭದೋಹಿಯ ಎಸ್‌ಪಿ ಶಾಸಕ ಜಾಹಿದ್ ಬೇಗ್ ಪ್ರತಿಭಟನೆ ನಡೆಸಿ, ಇದು ನಕಲಿ ಎನ್‌ಕೌಂಟರ್ ಎಂದು ಆರೋಪಿಸಿದ್ದರು.

ನಂತರ ಉತ್ತರ ಪ್ರದೇಶ ಸರ್ಕಾರವು ಸಿಬಿ-ಸಿಐಡಿ ತನಿಖೆಗೆ ಆದೇಶಿಸಿತು. ಇದು ಯೋಜಿತ ಪ್ರಕರಣ ಎಂಬುದನ್ನು ಸಿಐಡಿ ಬಹಿರಂಗಪಡಿಸಿತು’ ಎಂದು ಅವರು ವಿವರಿಸಿದರು.

ಆಗಿನ ಸಿಪಿಐ ಅಖಿಲಾನಂದ ಮಿಶ್ರಾ ಸೇರಿದಂತೆ 36 ಜನರ ವಿರುದ್ಧ ಸಿಬಿ-ಸಿಐಡಿ ಪ್ರಕರಣ ದಾಖಲಿಸಿತು. ಈ ಪ್ರಕರಣದಲ್ಲಿ ಎಲ್ಲರಿಗೂ ಬಳಿಕ ಜಾಮೀನು ನೀಡಲಾಯಿತು.

‘ಮಿಶ್ರಾ ಅವರು ಜೌನ್‌ಪುರದಲ್ಲಿ ಸಿಪಿಐ ಆಗಿದ್ದ ಅವಧಿಯಲ್ಲಿ ಧನಂಜಯ್ ಸಿಂಗ್ ಅವರನ್ನು ಹೋಲುವ ವಿದ್ಯಾರ್ಥಿ ನಾಯಕನೊಂದಿಗೆ ವೈಯಕ್ತಿಕ ದ್ವೇಷ ಬೆಳೆಸಿಕೊಂಡಿದ್ದರು ಎಂದು ಸಿಬಿ-ಸಿಐಡಿ ತನಿಖೆಯಿಂದ ತಿಳಿದುಬಂದಿದೆ. ಅವರನ್ನು ಭದೋಹಿಗೆ ವರ್ಗಾಯಿಸಿದ ನಂತರ, ಮಿಶ್ರಾ ಈ ವ್ಯಕ್ತಿಯನ್ನು ಜೌನ್‌ಪುರದಿಂದ ಕರೆತಂದು ಫ್ಲಾಟ್‌ನಲ್ಲಿ ಇರಿಸಿದ್ದರು’ ಎಂದು ಎಡಿಜಿಸಿ ತಿಳಿಸಿದೆ.

ತನ್ನ ಹಿರಿಯ ಅಧಿಕಾರಿಗಳಿಗೆ ಯಾವುದೇ ಮಾಹಿತಿ ನೀಡದ ಮಿಶ್ರಾ, ಸರೋಯಿಯಲ್ಲಿ ಹಾಡ ಹಗಲೇ ಧನಂಜಯ್ ಸಿಂಗ್ ಅವರಂತೆ ಹೋಲುವ ವ್ಯಕ್ತಿ ಸೇರಿದಂತೆ ನಾಲ್ವರನ್ನು ಕೊಲೆ ಮಾಡಿದ್ದಾನೆ ಎಂದು ಸರ್ಕಾರಿ ವಕೀಲರು ತಿಳಿಸಿದ್ದಾರೆ.

ಈ ನಡುವೆ ಧನಂಜಯ್ ಸಿಂಗ್ 1999ರಲ್ಲಿ ನ್ಯಾಯಾಲಯಕ್ಕೆ ಶರಣಾದರು. ವಿಚಾರಣೆ ಸಮಯದಲ್ಲಿ 10 ಆರೋಪಿ ಪೊಲೀಸ್ ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ಹೇಳಿದರು.

ಎರಡೂ ಕಡೆ ವಾದಗಳನ್ನು ಆಲಿಸಿದ ನಂತರ, ನ್ಯಾಯಾಧೀಶರು ಶುಕ್ರವಾರ ಪ್ರಕರಣದ ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.