ಹಾಪುಡ: ಉತ್ತರ ಪ್ರದೇಶದ ಗಢಮುಕ್ತೇಶ್ವರದಲ್ಲಿ ಪರಿಶಿಷ್ಟ ಜಾತಿ ಕುಟುಂಬಗಳು ಅಕ್ರಮವಾಗಿ ಜಾಗ ಒತ್ತುವರಿ ಮಾಡಿಕೊಂಡ ಆರೋಪದ ಮೇರೆಗೆ ಆ ಜಾಗ ತೆರವುಗೊಳಿಸುವಂತೆ ಸೂಚಿಸಿ ನೀಡಲಾಗಿದ್ದ ನೋಟಿಸ್ ಅನ್ನು ಹಾಪುಡ ಜಿಲ್ಲಾಡಳಿತವು ತಾತ್ಕಾಲಿಕವಾಗಿ ರದ್ದುಗೊಳಿಸಿದೆ.
ಪರಿಶಿಷ್ಟ ಜಾತಿಯ ಕುಟುಂಬಗಳಿಗೆ ಏಪ್ರಿಲ್ 8ರಂದು ನೋಟಿಸ್ ನೀಡಿದ್ದ ನಗರ ಪಾಲಿಕೆಯು, 15 ದಿನಗಳಲ್ಲಿ ಜಾಗ ತೆರವುಗೊಳಿಸಬೇಕು ಎಂದು ಸೂಚಿಸಿತ್ತು.
ಈ ಕುರಿತು ಶನಿವಾರ ಪ್ರತಿಕ್ರಿಯಿಸಿದ ಹಾಪುಡ ಜಿಲ್ಲೆಯ ಹೆಚ್ಚುವರಿ ಜಿಲ್ಲಾಧಿಕಾರಿ ಸಂದೀಪ್ ಕುಮಾರ್, ‘ಜಾಗ ತೆರವುಗೊಳಿಸುವಂತೆ ಸೂಚಿಸಿ 41 ನಿವಾಸಿಗಳಿಗೆ ನಗರಪಾಲಿಕೆ ನೀಡಿದ್ದ ನೋಟಿಸ್ ಅನ್ನು ಹಿಂಪಡೆಯಲಾಗಿದೆ. ಈ ಪ್ರಕರಣದ ಇತ್ಯರ್ಥಕ್ಕಾಗಿ ಜಿಲ್ಲಾಧಿಕಾರಿ ಮೂವರು ಸದಸ್ಯರ ಸಮಿತಿಯೊಂದನ್ನು ರಚಿಸಿದ್ದಾರೆ. ಈ ಪ್ರಕರಣದಲ್ಲಿನ ಎಲ್ಲ ಪಕ್ಷಗಳ ಅಭಿಪ್ರಾಯಗಳನ್ನು ಸಂಗ್ರಹಿಸಿ, 15 ದಿನಗಳಲ್ಲಿ ವರದಿ ನೀಡಲಿದೆ’ ಎಂದಿದ್ದಾರೆ.
ಕಂದಾಯ ದಾಖಲೆಗಳಲ್ಲಿ ಕೆರೆ ಎಂಬುದಾಗಿ ದಾಖಲಾಗಿದ್ದ ಜಾಗವನ್ನು 1986ರಲ್ಲಿ ಗುಢಮುಕ್ತೇಶ್ವರ ಮುನ್ಸಿಪಾಲಿಟಿ ಶುಲ್ಕ ಪಡೆದು ಇಲ್ಲಿನ ನಿವಾಸಿಗಳಿಗೆ ಪರಭಾರೆ ಮಾಡಿಕೊಟ್ಟಿದೆ ಎಂಬ ವಿಚಾರ ತಿಳಿದ ಬೆನ್ನಲ್ಲೇ, ಈ ಬಗ್ಗೆ ವಿಸ್ತೃತ ತನಿಖೆಗೆ ಮೂವರು ಸದಸ್ಯರ ಸಮಿತಿಯೊಂದನ್ನು ರಚಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.