ADVERTISEMENT

UP Elections 2022: ಒಬಿಸಿ ನಾಯಕರ ಬೆನ್ನಲ್ಲೇ ಬಿಜೆಪಿ ತೊರೆದ ‘ಗುಜ್ಜಾರ್’ ನಾಯಕ

ಸಂಜಯ ಪಾಂಡೆ
Published 12 ಜನವರಿ 2022, 10:50 IST
Last Updated 12 ಜನವರಿ 2022, 10:50 IST
ಸಾಂದರ್ಭಿಕ ಚಿತ್ರ (ಪಿಟಿಐ)
ಸಾಂದರ್ಭಿಕ ಚಿತ್ರ (ಪಿಟಿಐ)   

ಲಖನೌ: ‘ಗುಜ್ಜಾರ್’ ಸಮುದಾಯದ ಪ್ರಭಾವಿ ನಾಯಕ ಅವತಾರ್ ಸಿಂಗ್ ಭಡನ ಬಿಜೆಪಿ ತೊರೆದಿದ್ದು, ಬುಧವಾರ ರಾಷ್ಟ್ರೀಯ ಲೋಕ ದಳ (ಆರ್‌ಎಲ್‌ಡಿ) ಸೇರಿದ್ದಾರೆ. ಇದರೊಂದಿಗೆ ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಮತ್ತೊಂದು ಹಿನ್ನಡೆಯಾಗಿದೆ.

ಬಿಜೆಪಿ ತೊರೆಯುವ ನಿರ್ಧಾರ ಪ್ರಕಟಿಸಿದ ಬೆನ್ನಲ್ಲೇ ಭಡನ ಅವರು ದೆಹಲಿಯಲ್ಲಿ ಆರ್‌ಎಲ್‌ಡಿ ಅಧ್ಯಕ್ಷ ಜಯಂತ್ ಚೌಧರಿ ಜತೆ ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮುಜಫ್ಫರ್‌ನಗರದ ಮೀರ್‌ಪುರ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಭಡನ ಆರ್‌ಎಲ್‌ಡಿ ಚಿಹ್ನೆಯಡಿ ಜೇವಾರ್ ಕ್ಷೇತ್ರದಿಂದ ಕಣಕ್ಕಿಳಿಯುವ ಸಾಧ್ಯತೆ ಇದೆ ಎಂದೂ ಮೂಲಗಳು ಹೇಳಿವೆ. ಸಮಾಜವಾದಿ ಪಕ್ಷದ ಜತೆ (ಎಸ್‌ಪಿ) ಆರ್‌ಎಲ್‌ಡಿ ಮೈತ್ರಿ ಮಾಡಿಕೊಂಡಿದೆ.

ADVERTISEMENT

‘ಗುಜ್ಜಾರ್’ ಸಮುದಾಯದ ಪ್ರಭಾವಿ ನಾಯಕ ಎಂದು ಪರಿಗಣಿಸಲಾಗಿರುವ ಭಡನ ಅವರು ರೈತರ ಪ್ರತಿಭಟನೆಯನ್ನು ನಿಭಾಯಿಸಿದ ವಿಚಾರದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜತೆ ಭಿನ್ನಾಭಿಪ್ರಾಯ ಹೊಂದಿದ್ದರು.

ಈ ಮಧ್ಯೆ, ಭಡನ ಅವರನ್ನು ಪಕ್ಷಕ್ಕೆ ಸ್ವಾಗತಿಸಿರುವ ಜಯಂತ್ ಚೌಧರಿ, ಇದರಿಂದ ಪಶ್ಚಿಮ ಉತ್ತರ ಪ್ರದೇಶ ಭಾಗದಲ್ಲಿ ಪಕ್ಷವನ್ನು ಇನ್ನಷ್ಟು ಬಲಪಡಿಸಬಹುದು ಎಂದು ಹೇಳಿದ್ದಾರೆ.

ಬಿಜೆಪಿಯು ಪಶ್ಚಿಮ ಉತ್ತರ ಪ್ರದೇಶದಲ್ಲಿ ಪ್ರಭಾವಿ ‘ಜಾಟ್’ ಸಮುದಾಯದ ವಿರೋಧ ಎದುರಿಸುತ್ತಿರುವ ಸಂದರ್ಭದಲ್ಲೇ ಗುಜ್ಜಾರ್ ನಾಯಕ ಕೂಡ ಪಕ್ಷದಿಂದ ನಿರ್ಗಮಿಸಿದ್ದಾರೆ. ಪಶ್ಚಿಮ ಉತ್ತರ ಪ್ರದೇಶದಲ್ಲಿ, ಫೆಬ್ರುವರಿ 10ರಂದು ಮೊದಲ ಹಂತದಲ್ಲೇ ಚುನಾವಣೆ ನಡೆಯಲಿದೆ.

ಕಳೆದ 24 ಗಂಟೆ ಅವಧಿಯಲ್ಲಿ ಬಿಜೆಪಿ ತ್ಯಜಿಸಿದ ನಾಲ್ಕನೇ ನಾಯಕರಾಗಿದ್ದಾರೆ ಭಡನ. ಸಚಿವ ಸ್ವಾಮಿ ಪ್ರಸಾದ್ ಮೌರ್ಯ ಮಂಗಳವಾರ ಪಕ್ಷ ತೊರೆದಿದ್ದರು. ಬಿಜೆಪಿ ಶಾಸಕರಾದ ರೋಶನ್ ಲಾಲ್ ವರ್ಮಾ, ಬ್ರಿಜೇಶ್ ಪ್ರಜಾಪತಿ ಹಾಗೂ ಭಗವತಿ ಸಾಗರ್ ಕೂಡ ಪಕ್ಷ ತ್ಯಜಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.