ಸಾಂದರ್ಭಿಕ ಚಿತ್ರ
– ಎ.ಐ ಚಿತ್ರ
ಲಖನೌ: ಪೊಲೀಸ್ ದಾಖಲೆಗಳು ಮತ್ತು ಸಾರ್ವಜನಿಕ ಸೂಚನೆಗಳಲ್ಲಿ ಮಾಡಿರುವ ಎಲ್ಲಾ ರೀತಿಯ ಜಾತಿ ಉಲ್ಲೇಖಗಳನ್ನು ತಕ್ಷಣವೇ ತೆಗೆದುಹಾಕಲು ಉತ್ತರ ಪ್ರದೇಶ ಸರ್ಕಾರ ಆದೇಶಿಸಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಜಾತಿ ಆಧಾರಿತ ತಾರತಮ್ಯ ತೊಡೆದುಹಾಕುವ ಉದ್ದೇಶವನ್ನು ಹೊಂದಿರುವ ಅಲಹಾಬಾದ್ ಹೈಕೋರ್ಟ್‌ನ ತೀರ್ಪಿಗೆ ಅನುಸಾರ ಈ ಆದೇಶ ಹೊರಡಿಸಲಾಗಿದೆ.
ಜಾತಿ ಆಧಾರಿತ ರ‍್ಯಾಲಿಗಳು ಮತ್ತು ರಾಜಕೀಯ ಉದ್ದೇಶಗಳನ್ನು ಹೊಂದಿರುವ ಸಾರ್ವಜನಿಕ ಕಾರ್ಯಕ್ರಮಗಳನ್ನು ರಾಜ್ಯದಾದ್ಯಂತ ನಿಷೇಧಿಸಲಾಗಿದೆ. ಜಾತಿಯ ಕುರಿತು ಹೊಗಳುವ ಅಥವಾ ದ್ವೇಷವನ್ನು ಉತ್ತೇಜಿಸುವ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳ ಮೇಲೂ ನಿಗಾ ಇಡಲಾಗುವುದು ಎಂದು ಹೇಳಿದೆ.
ಅಧಿಕೃತ ಆದೇಶದ ಪ್ರಕಾರ ಇನ್ನು ಮುಂದೆ ಪೊಲೀಸ್ ನೋಂದಣಿ, ಪ್ರಕರಣದ ವರದಿ, ಬಂಧನಕ್ಕೆ ಸಂಬಂಧಿಸಿದ ದಾಖಲೆಗಳಲ್ಲಿ ಆರೋಪಿಗಳ ಜಾತಿಯನ್ನು ಉಲ್ಲೇಖಿಸಬಾರದು ಅಥವಾ ಪೊಲೀಸ್ ಠಾಣೆಯ ಸೂಚನಾ ಫಲಕಗಳಲ್ಲಿ ಪ್ರದರ್ಶಿಸಬಾರದು ಎಂದು ಮುಖ್ಯ ಕಾರ್ಯದರ್ಶಿ ದೀಪಕ್ ಕುಮಾರ್ ಸೂಚನೆ ನೀಡಿದ್ದಾರೆ.
‘ಅಲಹಾಬಾದ್ ಹೈಕೋರ್ಟ್ ಸೆಪ್ಟೆಂಬರ್ 16ರಂದು ನೀಡಿದ ತೀರ್ಪಿಗೆ ಅನುಗುಣವಾಗಿ ಪೊಲೀಸ್ ಇಲಾಖೆ ಮತ್ತು ಎಲ್ಲ ಜಿಲ್ಲಾಡಳಿತಗಳಿಗೆ ಈ ನಿರ್ದೇಶನ ನೀಡಲಾಗಿದ್ದು, ತಕ್ಷಣವೇ ಜಾರಿಗೆ ಬರುತ್ತದೆ’ ಎಂದು ತಿಳಿಸಿದ್ದಾರೆ.
ಈ ಆದೇಶದ ಪರಿಣಾಮಕಾರಿ ಜಾರಿಯನ್ನು ಖಚಿತಪಡಿಸಿಕೊಳ್ಳಲು ಮತ್ತು ಹೊಸ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ತರಬೇತಿ ನೀಡುವಂತೆಯೂ ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.