ADVERTISEMENT

ಮಕ್ಕಳ ಸರಣಿ ಸಾವಿನ ಪ್ರಕರಣ: ಡಾ.ಖಾನ್‌ ವಿರುದ್ಧದ ಮರು ವಿಚಾರಣಾ ಆದೇಶ ಹಿಂದಕ್ಕೆ

ಪಿಟಿಐ
Published 8 ಆಗಸ್ಟ್ 2021, 8:34 IST
Last Updated 8 ಆಗಸ್ಟ್ 2021, 8:34 IST
ಡಾ. ಕಫೀಲ್‌ ಖಾನ್‌
ಡಾ. ಕಫೀಲ್‌ ಖಾನ್‌   

ಅಲಹಾಬಾದ್‌ (ಉತ್ತರ ಪ್ರದೇಶ):‘ಅಮಾನತುಗೊಂಡಿರುವ ಮಕ್ಕಳ ವೈದ್ಯ ಡಾ.ಕಫೀಲ್ ಖಾನ್ ವಿರುದ್ಧದ ಇಲಾಖಾ ಮರು ವಿಚಾರಣೆಯ ಆದೇಶವನ್ನು ಹಿಂಪಡೆಯಲಾಗಿದೆ’ ಎಂದು ಉತ್ತರ ಪ್ರದೇಶ ಸರ್ಕಾರವು ಅಲಹಾಬಾದ್‌ ಹೈಕೋರ್ಟ್‌ಗೆ ತಿಳಿಸಿದೆ.

ಮಕ್ಕಳ ಸರಣಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಡಾ.ಕಫೀಲ್ ಖಾನ್ ವಿರುದ್ಧ ಇಲಾಖಾ ಮರು ವಿಚಾರಣೆ ನಡೆಸುವಂತೆ ಕಳೆದ ವರ್ಷ ಫೆಬ್ರುವರಿ 24ರಂದು ಆದೇಶಿಸಲಾಗಿತ್ತು.

‘ಡಾ.ಕಫೀಲ್ ಖಾನ್ ವಿರುದ್ಧ ಹೊರಡಿಸಲಾಗಿದ್ದ ಮರು ವಿಚಾರಣೆ ಆದೇಶವನ್ನು ಹಿಂಪಡೆಯಲಾಗಿದೆ’ ಎಂದು ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಮನೀಶ್‌ ಗೋಯಲ್‌ ಶುಕ್ರವಾರ ಹೇಳಿದರು.

ADVERTISEMENT

ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಶಿಸ್ತಿನ ಪ್ರಕ್ರಿಯೆಗಳನ್ನು ಮೂರು ತಿಂಗಳೊಳಗೆ ಮುಕ್ತಾಯಗೊಳಿಸುವುದಾಗಿ ಮನೀಶ್‌ ಗೋಯಲ್‌ ಅವರು ನ್ಯಾಯಮೂರ್ತಿ ಯಶವಂತ್ ವರ್ಮಾ ಅವರಿಗೆ ತಿಳಿಸಿದರು.

ಈ ‍ಪ್ರಕರಣದ ಮುಂದಿನ ವಿಚಾರಣೆಯನ್ನು ಆಗಸ್ಟ್‌ 10ಕ್ಕೆ (ಮಂಗಳವಾರ) ನಿಗದಿ ಮಾಡಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದ ಶಿಸ್ತು ಪ್ರಕ್ರಿಯೆಗಳು ಇನ್ನೂ ಅಂತ್ಯವಾಗಿಲ್ಲ. ಆದರೂ ಅಮಾನತುಗೊಳಿಸಲಾದ ಒಂಬತ್ತು ಮಂದಿಯ ಪೈಕಿ ಏಳು ಮಂದಿಯನ್ನು ಮತ್ತೆ ಕರ್ತವ್ಯಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಡಾ. ಖಾನ್‌ ಅವರನ್ನು 2017ರ ಆಗಸ್ಟ್‌ 22ರಂದು ಅಮಾನತುಗೊಳಿಸಲಾಗಿದೆ. ಆದರೂ ಪ್ರಕರಣ ವಿಚಾರಣೆ ಇನ್ನೂ ಮುಗಿದಿಲ್ಲ ಎಂದು ಈ ವರ್ಷದ ಜುಲೈನಲ್ಲಿ ನ್ಯಾಯಾಲಯ ಹೇಳಿತ್ತು.

ಅಲ್ಲದೆ ಈ ಪ್ರಕರಣದ ವಿಚಾರಣೆಯನ್ನು ಮೂರು ತಿಂಗಳೊಳಗೆ ಮುಕ್ತಾಯಗೊಳಿಸಬೇಕು ಎಂದು 2019ರ ಮಾರ್ಚ್‌ 7 ರಂದೇ ನ್ಯಾಯಾಲಯವುರಾಜ್ಯ ಸರ್ಕಾರಕ್ಕೆ ಸೂಚಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.