ADVERTISEMENT

ತನ್ನಿಷ್ಟದ ಪಕ್ಷಕ್ಕೆ ಮತ ಚಲಾಯಿಸದ ಹೆಂಡತಿಯನ್ನು ಮನೆಯಿಂದ ಹೊರಹಾಕಿದ ಪತಿ!

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2022, 8:28 IST
Last Updated 23 ಮಾರ್ಚ್ 2022, 8:28 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬರೇಲಿ: ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡು ಈಗಾಗಲೇ ಯಾವ ಪಕ್ಷ ಅಧಿಕಾರ ಹಿಡಿಯುತ್ತದೆ ಎಂಬುದು ಎಲ್ಲರಿಗೂ ತಿಳಿದೇ ಇದೆ. ಆದರೆ ಇಲ್ಲೊಬ್ಬ ವ್ಯಕ್ತಿ ತನ್ನಿಷ್ಟದ ಪಕ್ಷದ ಅಭ್ಯರ್ಥಿಗೆ ಮತ ಚಲಾಯಿಸಿಲ್ಲ ಎಂದು ತನ್ನ ಹೆಂಡತಿಯನ್ನೇ ಮನೆಯಿಂದ ಹೊರಹಾಕಿರುವ ಘಟನೆ ನಡೆದಿದೆ.

ಇದೇ ವಿಚಾರವಾಗಿ ಎಫ್ಐಆರ್ ದಾಖಲಿಸುವಂತೆ ಮತ್ತು ಹೆಂಡತಿಯನ್ನು ಥಳಿಸಿ ಮನೆಯಿಂದ ಹೊರಹಾಕಿರುವ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಷ್ಟ್ರೀಯ ಮಹಿಳಾ ಆಯೋಗವು ರಾಜ್ಯದ ಪೊಲೀಸರನ್ನು ಒತ್ತಾಯಿಸಿದೆ.

21 ವರ್ಷದ ಮಹಿಳೆಗೆ ವಿಚ್ಛೇದನ ನೀಡುವುದಾಗಿಯೂ ಪತಿ ಬೆದರಿಸಿದ್ದಾನೆ. ಈ ಸಂಬಂಧ ತನ್ನ ಗಂಡನ ವಿರುದ್ಧ ಮಹಿಳೆ ಇನ್ನೂ ಅಧಿಕೃತವಾಗಿ ದೂರು ದಾಖಲಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ವರದಿಗಳ ಪ್ರಕಾರ, ತಾನು ಮತ ಚಲಾಯಿಸಿದ ವ್ಯಕ್ತಿ ಚುನಾವಣೆಯಲ್ಲಿ ಜಯ ಸಾಧಿಸಿರುವುದಕ್ಕೆ ಖುಷಿಯಾಗಿರುವುದಾಗಿ ತನ್ನ ಸಂಬಂಧಿಕರ ಬಳಿ ಮಹಿಳೆ ಹೇಳಿಕೊಂಡಿದ್ದಾರೆ. ಇದಾದ ಬಳಿಕ ಸಿಟ್ಟಾದ ಆಕೆಯ ಪತಿ, ಮಾ.11 ರಂದು ಬರೇಲಿಯ ಬರದಾರಿ ಪ್ರದೇಶದಲ್ಲಿರುವ ಮನೆಯಿಂದ ಹೊರಹಾಕಿದ್ದಾರೆ.

ತಾನು ಮತ ಚಲಾಯಿಸಿರುವ ಪಕ್ಷವು ಭಾರತದಲ್ಲಿ ಮುಸ್ಲಿಂ ಮಹಿಳೆಯರ ಸ್ಥಿತಿಯನ್ನು ಸುಧಾರಿಸಲು ನೆರವಾಗುವಂತ ಬಲಿಷ್ಠ ಕಾನೂನುಗಳನ್ನು ಜಾರಿಗೆ ತಂದಿದೆ ಎಂದಿದ್ದಾರೆ.

ತನ್ನ ಗಂಡನಿಂದ ಒದೆ ತಿಂದ ಬಳಿಕ ಆಕೆ ಸಹಾಯಕ್ಕಾಗಿ ಎನ್‌ಜಿಒ ಮೊರೆ ಹೋಗಿದ್ದಾರೆ. ಬಳಿಕ ಮಾಧ್ಯಮಗಳ ಮೂಲಕ ಈ ವಿಚಾರ ಬಹಿರಂಗಗೊಂಡಿದೆ ಮತ್ತು ಪೊಲೀಸರಿಗೆ ಮಾಹಿತಿ ದೊರಕಿದೆ.

ಮಹಿಳಾ ಆಯೋಗದ ಅಧ್ಯಕ್ಷೆ ರೇಶಾ ಶರ್ಮಾ ಉತ್ತರ ಪ್ರದೇಶದ ಡಿಜಿಪಿಗೆ ಪತ್ರ ಬರೆದು ಮಹಿಳೆಯ ಪತಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ದಂಪತಿ ಕಳೆದ ವರ್ಷವಷ್ಟೇ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಇಬ್ಬರೂ ನೆರೆಹೊರೆಯವರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.