ADVERTISEMENT

ಉತ್ತರ ಪ್ರದೇಶ: ಮೋದಿ, ಯೋಗಿ ಚಿತ್ರ ಬಳಸಿದ್ದ ಸಚಿವರ ಸಹೋದರನ ವಿರುದ್ಧ ಎಫ್‌ಐಆರ್‌

ಮೊಬೈಲ್‌ ಬ್ರ್ಯಾಂಡ್‌ ಉತ್ತೇಜನಕ್ಕೆ ಚಿತ್ರಗಳ ಬಳಕೆ

ಪಿಟಿಐ
Published 30 ಡಿಸೆಂಬರ್ 2020, 6:24 IST
Last Updated 30 ಡಿಸೆಂಬರ್ 2020, 6:24 IST
ನರೇಂದ್ರ ಮೋದಿ ಮತ್ತು ಯೋಗಿ ಆದಿತ್ಯನಾಥ್‌
ನರೇಂದ್ರ ಮೋದಿ ಮತ್ತು ಯೋಗಿ ಆದಿತ್ಯನಾಥ್‌    

ಲಖನೌ: ಮೊಬೈಲ್‌ ದೂರವಾಣಿ ಬ್ರ್ಯಾಂಡ್‌ ಪ್ರಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರ ಭಾವಚಿತ್ರಗಳನ್ನು ಬಳಸಿದ್ದಕ್ಕಾಗಿ ಉತ್ತರ ಪ್ರದೇಶದ ಸಚಿವರೊಬ್ಬರ ಸಹೋದರನ ವಿರದ್ಧ ವಂಚನೆ ಪ್ರಕರಣ ದಾಖಲಿಸಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸೆಂಬರ್‌ 26ರಂದು ಹಜರತ್‌ಗಂಜ್‌ ಪೊಲೀಸ್‌ ಠಾಣೆಯಲ್ಲಿ ವೃತ್ತಿಪರ ಶಿಕ್ಷಣ ಮತ್ತು ಕೌಶಲ ಅಭಿವೃದ್ಧಿ ಖಾತೆ ರಾಜ್ಯ ಸಚಿವ ಕಪೀಲ್‌ ದೇವ್‌ ಅಗರವಾಲ್ ಅವರ ಸಹೋದರ ಲಲಿತ್‌ ಅಗರವಾಲ್‌ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಕಪೀಲ್‌ ದೇವ್‌ ಅಗರವಾಲ್‌, ‘ದುರುದ್ದೇಶದಿಂದ ನನ್ನ ಸಹೋದರರನ್ನು ಗುರಿಯಾಗಿರಿಸಿಕೊಂಡು ಆರೋಪ ಹೊರಿಸಲಾಗಿದೆ. ಈ ಪ್ರಕರಣದಲ್ಲಿ ಯಾವುದೇ ರೀತಿ ಹುರುಳಿಲ್ಲ. ನನ್ನ ಸಹೋದರ ಎಲ್ಲ ಆರೋಪಗಳಿಂದ ಮುಕ್ತನಾಗುವ ವಿಶ್ವಾಸವಿದೆ’ ಎಂದು ತಿಳಿಸಿದ್ದಾರೆ.

ADVERTISEMENT

ಡಿಸೆಂಬರ್‌ 22ರಂದು ಹೊಸ ಮೊಬೈಲ್‌ ದೂರವಾಣಿಗಳನ್ನು ಅನಾವರಣಗೊಳಿಸಲಾಗಿತ್ತು. ಈ ಸಂದರ್ಭದಲ್ಲಿ ಭಾವಚಿತ್ರಗಳ ಬಳಕೆ ಬಗ್ಗೆ ಪ್ರಶ್ನೆಗಳು ಉದ್ಭವವಾಗಿದ್ದವು. ಡಿಸೆಂಬರ್‌ 26ರಂದು ಜಾಹೀರಾತು ಸಂಸ್ಥೆ ಮೋದಿ ಮತ್ತು ಯೋಗಿ ಆದಿತ್ಯನಾಥ್‌ ಅವರ ಚಿತ್ರಗಳನ್ನು ತೆಗೆದುಹಾಕಿತ್ತು. ಭಾವಚಿತ್ರ ಬಳಕೆಗೆ ಈ ಸಂಸ್ಥೆ ಕ್ಷಮೆಯನ್ನು ಸಹ ಕೋರಿತ್ತು.

ಈ ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಸುವಂತೆ ವಿರೋಧ ಪಕ್ಷ ಕಾಂಗ್ರೆಸ್‌ ಆಗ್ರಹಿಸಿದೆ.

‘ಹೊಸ ಮೊಬೈಲ್‌ ದೂರವಾಣಿ ಅನಾವರಣಗೊಳಿಸುವ ಸಂದರ್ಭದಲ್ಲಿ ಸಚಿವರು ಪತ್ರಿಕಾಗೋಷ್ಠಿ ನಡೆಸಿದ್ದರು. ಈ ಮೊಬೈಲ್‌ ಸ್ವದೇಶಿಯಾಗಿದ್ದು, ಕೌಶಲ ವಿಕಾಸ ಯೋಜನೆ ಅಡಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ ಎಂದು ಸಚಿವರು ಸಾರ್ವಜನಿಕರಿಗೆ ತಿಳಿಸಿದ್ದರು. ಉತ್ತರ ಪ್ರದೇಶದಲ್ಲಿ ಭ್ರಷ್ಟಾಚಾರ ಮಿತಿಮೀರಿದೆ ಎನ್ನುವುದಕ್ಕೆ ಇದೊಂದು ಉದಾಹರಣೆ ಸಾಕ್ಷಿ’ ಎಂದು ಉತ್ತರ ಪ್ರದೇಶ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಅಜಯ್‌ ಕುಮಾರ್‌ ಲಲ್ಲು ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.