ಲಖನೌ: ಬೌದ್ಧ ಮತ್ತು ಸಿಖ್ ಧರ್ಮೀಯರ ಆಧ್ಯಾತ್ಮಿಕ ಯಾತ್ರೆಗೆ ಅನುಕೂಲ ಕಲ್ಪಿಸುವ ‘ಭೌದ್ಧರ ತೀರ್ಥ ದರ್ಶನ ಯೋಜನೆ’ ಮತ್ತು ‘ಪಂಚ್ ತಖ್ತ್ ಯಾತ್ರೆ ಯೋಜನೆ’ ಜಾರಿ ಮಾಡುವಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಶನಿವಾರ ನಡೆದ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ‘ತೀರ್ಥಯಾತ್ರೆ ಎಂದರೆ ಆಧ್ಯಾತ್ಮಿಕ ಉನ್ನತಿ ಮತ್ತು ಸಾಮಾಜಿಕ ಸಾಮರಸ್ಯದ ಹಾದಿ. ತೀರ್ಥಕ್ಷೇತ್ರಗಳಿಗೆ ತೆರಳುವ ಭಕ್ತರಿಗೆ ನೆರವು ನೀಡಬೇಕಾಗಿರುವುದು ಸರ್ಕಾರದ ಜವಾಬ್ದಾರಿ’ ಎಂದರು.
ಬೌದ್ಧರ ತೀರ್ಥ ದರ್ಶನ ಯೋಜನೆಯಡಿಯಲ್ಲಿ ಭಾರತದಾದ್ಯಂತ ಇರುವ ಪ್ರಮುಖ ತೀರ್ಥಕ್ಷೇತ್ರಗಳಿಗೆ ಭೇಟಿ ನೀಡುವ ಭೌದ್ಧ ಅನುಯಾಯಿಗಳಿಗೆ ಅದರಲ್ಲೂ ಭಿಕ್ಕುಗಳಿಗೆ ಹಣಕಾಸು ನೆರವು ನೀಡಲಾಗುವುದು ಎಂದು ತಿಳಿಸಿದರು.
ಪಂಚ್ ತಖ್ತ್ ಯಾತ್ರೆ ಯೋಜನೆ ಅಡಿಯಲ್ಲಿ ಸಿಖ್ ಧರ್ಮದ ಐದು ಪವಿತ್ರ ಪ್ರಾರ್ಥನಾ ಸ್ಥಳಗಳಿಗೆ ತೆರಳುವ ಉತ್ತರ ಪ್ರದೇಶದ ಸಿಖ್ ಭಕ್ತರಿಗೆ ಹಣಕಾಸು ನೆರವು ನೀಡಲಾಗುವುದು ಎಂದು ತಿಳಿಸಿದರು.
ಈ ಯೋಜನೆಗಳಡಿ ತೀರ್ಥಯಾತ್ರೆಗೆ ತೆರಳುವ ಭಕ್ತರಿಗೆ ತಲಾ ಕನಿಷ್ಠ ₹10,000 ನೀಡಲಾಗುತ್ತದೆ ಎಂದು ಪ್ರಕಟಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.