ADVERTISEMENT

ಕನ್ವರ್‌ ಯಾತ್ರೆ: ನಿರ್ಧಾರ ಬದಲಿಗೆ 19ರವರೆಗೆ ಅವಕಾಶ

ಧಾರ್ಮಿಕ ಆಚರಣೆಗಿಂತ ಬದುಕುವ ಹಕ್ಕು ಮುಖ್ಯ: ‘ಸುಪ್ರೀಂ’

​ಪ್ರಜಾವಾಣಿ ವಾರ್ತೆ
Published 16 ಜುಲೈ 2021, 20:00 IST
Last Updated 16 ಜುಲೈ 2021, 20:00 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ: ಧಾರ್ಮಿಕ ಆಚರಣೆಗಳಿಗಿಂತಲೂ ದೇಶದ ನಾಗರಿಕರ ಬದುಕುವ ಹಕ್ಕು ಮುಖ್ಯ. ಹಾಗಾಗಿ, ಕನ್ವರ್‌ ಯಾತ್ರೆಗೆ ಅನುಮತಿ ನೀಡಿರುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಶುಕ್ರವಾರ ಸೂಚಿಸಿದೆ.

ಈ ವಿಷಯವು ಧಾರ್ಮಿಕ ಭಾವನೆಗಳೂ ಸೇರಿದಂತೆ ದೇಶದ ಪ್ರತಿಯೊಬ್ಬರ ಭಾವನೆಗಳಿಗೆ ಸಂಬಂಧಿಸಿರುವುದರ ಜೊತೆಗೆ ಅವರೆಲ್ಲರ ಕಾಳಜಿಯ ವಿಷಯವೂ ಆಗಿದೆ. ಹೀಗಾಗಿ, ಕೋವಿಡ್‌–19ರ ಸಂಭಾವ್ಯ ಮೂರನೇ ಅಲೆಯ ಆತಂಕದ ನಡುವೆಯೂ ಯಾತ್ರೆ ನಡೆಸಲು ಅನುಮತಿ ನೀಡಿರುವ ನಿರ್ಧಾರವನ್ನು ಪುನಃ ಪರಿಶೀಲಿಸಬೇಕು. ಇಲ್ಲದೇ ಹೋದಲ್ಲಿ, ನ್ಯಾಯಾಲಯವೇ ಈ ಬಗ್ಗೆ ಸೋಮವಾರ ಆದೇಶ ಹೊರಡಿಸಲಿದೆ ಎಂದು ನ್ಯಾಯಮೂರ್ತಿಗಳಾದ ಆರ್‌.ಎಫ್‌ ನರೀಮನ್‌ ಹಾಗೂ ಬಿ.ಆರ್‌. ಗವಾಯಿ ಅವರ ನ್ಯಾಯಪೀಠ ಸೂಚನೆ ನೀಡಿತು.

ಯಾತ್ರೆಯನ್ನು ಸಾಂಕೇತಿಕವಾಗಿ ಮಾತ್ರ ನಡೆಸಲು ಉದ್ದೇಶಿಸಿರುವುದಾಗಿಉತ್ತರ ಪ್ರದೇಶ ಸರ್ಕಾರದ ಪರವಾಗಿ ಹಾಜರಿದ್ದ ಹಿರಿಯ ವಕೀಲ ಸಿ.ಎಸ್‌. ವೈದ್ಯನಾಥನ್‌ ನ್ಯಾಯಾಲಯಕ್ಕೆ ತಿಳಿಸಿದರು. ಪ್ರಕೃತಿ ವಿಕೋಪ ನಿರ್ವಹಣಾ ಪ್ರಾಧಿಕಾರವು ಈ ಬಗ್ಗೆ ಸಾಕಷ್ಟು ವಿಚಾರ–ವಿಮರ್ಶೆ ನಡೆಸಿದ್ದು, ಧಾರ್ಮಿಕ ಕಾರಣಗಳಿಂದಾಗಿ ಯಾರೋ ಒಬ್ಬರು ಯಾತ್ರೆ ನಡೆಸಲು ನಿರ್ಧರಿಸಿದರೆ, ಅಂಥವರು ಆರ್‌ಟಿ–ಪಿಸಿಆರ್‌ ಪರೀಕ್ಷೆಯ ನೆಗೆಟಿವ್‌ ವರದಿ ಹೊಂದಿರಬೇಕು. ಜೊತೆಗೆ ಎರಡೂ ಡೋಸ್‌ ಲಸಿಕೆ ಪಡೆದಿರಬೇಕು ಎಂಬ ನಿರ್ಣಯಕ್ಕೆ ಬಂದಿರುವುದಾಗಿ ಮಾಹಿತಿ ನೀಡಿದರು.

ADVERTISEMENT

ಉತ್ತರ ಪ್ರದೇಶ ಸರ್ಕಾರವು ಭೌತಿಕವಾಗಿ ಯಾತ್ರೆ ನಡೆಸಲು ಸಾಧ್ಯವೇ ಇಲ್ಲ. ಇದು ಶೇಕಡ ನೂರರಷ್ಟು ನಿಜ ಎಂದುನ್ಯಾಯಪೀಠ ಹೇಳಿದೆ.

ಕೋವಿಡ್‌ ಸಾಂಕ್ರಾಮಿಕ ಸಂದರ್ಭದಲ್ಲಿ ಉತ್ತರ ಪ್ರದೇಶ ಸರ್ಕಾರವು ಕನ್ವರ್‌ ಯಾತ್ರೆಗೆ ಅನುಮತಿ ನೀಡಿರುವುದರಿಂದ, ಈ ಬಗ್ಗೆ ಸುಪ್ರೀಂ ಕೋರ್ಟ್‌ ಸ್ವಯಂಪ್ರೇರಿತವಾಗಿ ಮೊಕದ್ದಮೆ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದೆ.

ಶಿವಭಕ್ತರು, ಗಂಗಾನದಿಯ ವಿವಿಧ ಸ್ನಾನಘಟ್ಟಗಳಲ್ಲಿ ಪವಿತ್ರ ಸ್ನಾನ ಮಾಡಲಿರುವ ಈ ಕನ್ವರ್‌ ಯಾತ್ರೆ ಜುಲೈ 25ರಿಂದ ಆಗಸ್ಟ್‌ 6ರವರೆಗೆ ನಡೆಯಲಿದೆ.

ಈ ಬಗ್ಗೆ ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಪ್ರಮಾಣಪತ್ರವೊಂದರಲ್ಲಿ, ದೇವಾಲಯಗಳಲ್ಲಿ ಪೂಜೆ ಸಲ್ಲಿಸುವುದಕ್ಕಾಗಿ ಗಂಗಾಜಲ ತರಲು ಭಕ್ತರಿಗೆ ಹರಿದ್ವಾರದ ಪ್ರವೇಶ ನೀಡುವುದಿಲ್ಲ. ಸಂಪ್ರದಾಯ ಪಾಲನೆಗಾಗಿ ಹಾಗೂ ಭಕ್ತರ ಧಾರ್ಮಿಕ ಭಾವನೆಗಳನ್ನು ಗೌರವಿಸುವುದಕ್ಕಾಗಿವಿವಿಧ ಪ್ರದೇಶಗಳಲ್ಲಿ ಟ್ಯಾಂಕರ್‌ ಮೂಲಕ ಗಂಗಾಜಲ ಪೂರೈಸುವ ವ್ಯವಸ್ಥೆಮಾಡಲಾಗುವುದು ಎಂದು ತಿಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.