ADVERTISEMENT

ಕೋವಿಡ್‌ 19 ಪರೀಕ್ಷೆ ನಡೆಸಲು ಬಂದವರನ್ನು ಹೊಡೆದು ಓಡಿಸಿದ ಉ.ಪ್ರ ಗ್ರಾಮಸ್ಥರು

​ಪ್ರಜಾವಾಣಿ ವಾರ್ತೆ
Published 29 ಮೇ 2021, 15:55 IST
Last Updated 29 ಮೇ 2021, 15:55 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೋವಿಡ್‌ 19 ಪರೀಕ್ಷೆ ನಡೆಸಲು ಬಂದ ವೈದ್ಯಕೀಯ ತಂಡದ ಮೇಲೆ ಗ್ರಾಮಸ್ಥರು ಹಲ್ಲೆ ನಡೆಸಿ, ಓಡಿಸಿದ ಘಟನೆ ಉತ್ತರ ಪ್ರದೇಶದ ಗ್ರಾಮವೊಂದರಲ್ಲಿ ನಡೆದಿದೆ.

ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯಿಂದ ಸುಮಾರು 50 ಕಿ.ಮೀ. ದೂರದ ರಿಯೊತಿಪುರ ಎಂಬ ಗ್ರಾಮವೊಂದಕ್ಕೆ ಕೋವಿಡ್‌ ಪರೀಕ್ಷೆ ನಡೆಸಲು ಸಮುದಾಯ ಆರೋಗ್ಯ ಕೇಂದ್ರ(ಸಿಎಚ್‌ಸಿ)ದ ತಂಡ ಶುಕ್ರವಾರ ಭೇಟಿ ನೀಡಿತ್ತು.

ಗ್ರಾಮದ ಅಂಗಡಿ ಬಳಿ ಕ್ಯಾಂಪ್‌ ರಚಿಸಿದ್ದ ವೈದ್ಯಕೀಯ ತಂಡ ಅಂಗಡಿಗೆ ಭೇಟಿ ನೀಡುವ ಗ್ರಾಮಸ್ಥರಿಗೆ ಕೋವಿಡ್‌ 19 ಪರೀಕ್ಷೆ ಮಾಡಿಸಿಕೊಳ್ಳುವಂತೆ ಸಲಹೆ ನೀಡುತ್ತಿದ್ದರು. ಆದರೆ ಯಾರೂಬ್ಬರು ಕೊರೊನಾ ಸೋಂಕು ಪರೀಕ್ಷೆ ಮಾಡಿಸಿಕೊಳ್ಳಲು ಮುಂದೆ ಬರಲಿಲ್ಲ. ಕೋವಿಡ್‌ 19 ಪರೀಕ್ಷೆ ಮಾಡಿಸಿಕೊಳ್ಳುವ ವರೆಗೆ ಗ್ರಾಮಸ್ಥರಿಗೆ ದಿನಸಿ ನೀಡಕೂಡದು ಎಂದು ಅಂಗಡಿ ಮಾಲೀಕರಿಗೆ ಆರೋಗ್ಯ ಸಿಬ್ಬಂದಿ ಆಗ್ರಹಿಸಿದ್ದಾರೆ ಎನ್ನಲಾಗಿದೆ.

ADVERTISEMENT

ಇದರಿಂದ ಕುಪಿತಗೊಂಡ ಗ್ರಾಮಸ್ಥರು ಆರೋಗ್ಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ, ಗ್ರಾಮದಿಂದ ಓಡಿಸಿದ್ದಾರೆ ಎನ್ನಲಾಗಿದೆ ಹಲ್ಲೆಗೊಳಗಾದ ವೈದ್ಯಕೀಯ ತಂಡ ಗ್ರಾಮಸ್ಥರ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕೆಲವು ದಿನಗಳ ಹಿಂದೆ ಇದೇ ಜಿಲ್ಲೆಯ ಸಿಸೌದಾ ಎಂಬ ಗ್ರಾಮದ ಜನರು ಕೋವಿಡ್‌ ಲಸಿಕೆ ನೀಡಲು ವೈದ್ಯಕೀಯ ತಂಡ ಗ್ರಾಮಕ್ಕೆ ಆಗಮಿಸಿದಾಗ ಹೆದರಿ ನದಿಗೆ ಹಾರಿದ್ದ ಘಟನೆ ನಡೆದಿತ್ತು. ಸುಮಾರು 200 ಮಂದಿ ಲಸಿಕೆಗೆ ಹೆದರಿ ಮನೆ ಬಿಟ್ಟು ಓಡಿಹೋಗಿದ್ದರು. ಆರೋಗ್ಯ ಅಧಿಕಾರಿಗಳು ಮತ್ತು ವೈದ್ಯಕೀಯ ಸಿಬ್ಬಂದಿ ರಸ್ತೆಯಲ್ಲಿರುವುದನ್ನು ಗಮನಿಸಿದ ನದಿಯತ್ತ ಓಡಿ ಹೋಗಿ ಹಾರಿದ್ದರು. ನದಿಯ ಬಳಿ ತೆರಳಿದ ವೈದ್ಯಕೀಯ ತಂಡ ಗ್ರಾಮಸ್ಥರ ಮನವೊಲಿಸಿ ಲಸಿಕೆ ನೀಡುವಲ್ಲಿ ಸಫಲವಾಗಿತ್ತು. ಉತ್ತರ ಪ್ರದೇಶದ ಹಲವು ಜಿಲ್ಲೆಗಳಲ್ಲಿ ಇಂತಹ ಅನೇಕ ಘಟನೆಗಳು ವರದಿಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.