ADVERTISEMENT

‘ಸುಖೋಯ್‌’ ಮೇಲ್ದರ್ಜೆಗೆ ರಷ್ಯಾ ರಕ್ಷಣಾ ಸಚಿವರೊಂದಿಗೆ ರಾಜನಾಥ್‌ ಸಿಂಗ್‌ ಚರ್ಚೆ

ಪಿಟಿಐ
Published 27 ಜೂನ್ 2025, 12:56 IST
Last Updated 27 ಜೂನ್ 2025, 12:56 IST
ರಾಜನಾಥ್‌ ಸಿಂಗ್‌
ರಾಜನಾಥ್‌ ಸಿಂಗ್‌   

ನವದೆಹಲಿ: ಆಪರೇಷನ್‌ ಸಿಂಧೂರ ಕಾರ್ಯಾಚರಣೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದ ಸುಖೋಯ್‌– 30 ಎಂಕೆಐ ಯುದ್ಧ ವಿಮಾನಗಳನ್ನು ಮೇಲ್ದರ್ಜೆಗೇರಿಸುವ ಕುರಿತಂತೆ ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್‌ ಹಾಗೂ ರಷ್ಯಾದ ರಕ್ಷಣಾ ಸಚಿವ ಆಂಡ್ರೆ ಬೆಲೊಸೊವ್‌ ಚೀನಾದಲ್ಲಿ ಗುರುವಾರ ದ್ವಿಪಕ್ಷೀಯ ಚರ್ಚೆ ನಡೆಸಿದ್ದಾರೆ.

ಚಿಂಗ್‌ಡಾವ್‌ನಲ್ಲಿ ನಡೆದ ಶಾಂಘೈ ಸಹಕಾರ ಒಕ್ಕೂಟದ (ಎಸ್‌ಸಿಒ) ಶೃಂಗಸಭೆಯಲ್ಲಿ ಭಾಗಿಯಾಗಿದ್ದ ಎರಡೂ ದೇಶದ ರಕ್ಷಣಾ ಸಚಿವರು ಮಾತುಕತೆ ನಡೆಸಿದ್ದು, ಇದೇ ಸಂದರ್ಭ ಕ್ಷಿಪಣಿಗಳ ಉತ್ಪಾದನೆಯೂ ಸೇರಿದಂತೆ ಎಸ್‌– 400 ವಾಯು ರಕ್ಷಣಾ ವ್ಯವಸ್ಥೆಯ ಇನ್ನೆರಡು ಘಟಕಗಳ ತ್ವರಿತ ಪೂರೈಕೆಯ ಬಗ್ಗೆಯೂ ಪ್ರಸ್ತಾಪವಾಗಿದೆ ಎಂದು ರಕ್ಷಣಾ ಸಚಿವಾಲಯವು ಶುಕ್ರವಾರ ತಿಳಿಸಿದೆ.

ಭಾರತೀಯ ವಾಯುಪಡೆಯಲ್ಲಿ ಸುಮಾರು 260 ಸುಖೋಯ್‌ 30–ಎಂಕೆಐ ಜೆಟ್‌ಗಳಿದ್ದು, ಇವುಗಳನ್ನು ಉನ್ನತೀಕರಿಸುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಹೊಂದಲಾಗಿದೆ.

ADVERTISEMENT

ಪ್ರಸ್ತುತ ಭೌಗೋಳಿಕ ರಾಜಕೀಯ ಸನ್ನಿವೇಶಗಳು, ಗಡಿಯಾಚೆಗಿನ ಭಯೋತ್ಪಾದನೆ ಹಾಗೂ ಭಾರತ– ರಷ್ಯಾ ನಡುವಿನ ರಕ್ಷಣಾ ಸಹಕಾರಕ್ಕೆ ಸಂಬಂಧಿಸಿದ ಹಲವು ವಿಷಯಗಳ ಕುರಿತಂತೆ ಇಬ್ಬರೂ ರಕ್ಷಣಾ ಸಚಿವರು ಸುದೀರ್ಘ ಚರ್ಚೆ ನಡೆಸಿದ್ದಾರೆ ಎಂದಿದೆ.

ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕರ ದಾಳಿ ಹಾಗೂ ಇದಕ್ಕೆ ಪ್ರತಿಯಾಗಿ ಭಾರತವು ಕೈಗೊಂಡ ಆಪರೇಷನ್‌ ಸಿಂಧೂರ ಕಾರ್ಯಾಚರಣೆಯ ಕುರಿತಂತೆ ರಾಜನಾಥ್ ಸಿಂಗ್‌ ಅವರು ಆಂಡ್ರೆ ಅವರಿಗೆ ಮಾತುಕತೆಯ ವೇಳೆ ವಿವರಿಸಿದರು ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.