ಚಿನ್ನಾಭರಣ ಹಾಗೂ ಸ್ವತ್ತುಗಳು
ತಿರುವನಂತಪುರ: ಶಬರಿಮಲೆ ಅಯ್ಯಪ್ಪ ದೇವಸ್ಥಾನದ ದ್ವಾರಪಾಲಕ ಮೂರ್ತಿಗಳಲ್ಲಿನ ಚಿನ್ನ ಲೇಪಿತ ತಾಮ್ರದ ಕವಚದಲ್ಲಿನ ಚಿನ್ನದ ತೂಕ ಕಡಿಮೆಯಾಗಿರುವ ಸಂಬಂಧ ವಿವಾದ ಎದ್ದಿರುವ ಬೆನ್ನಲ್ಲೇ, ಬಾಲಶ್ಶೇರಿಯಲ್ಲಿನ ಕೋಟ ವೇಟಕ್ಕಾರು ಮಕ್ಕಾನ್ ದೇವಸ್ಥಾನ ಮತ್ತು ಮುಕ್ಕಂನ ನೀಲೇಶ್ವರ ಶಿವ ದೇವಸ್ಥಾನದಲ್ಲಿ ಕೂಡ ಚಿನ್ನದ ಆಭರಣಗಳು ಕಾಣೆಯಾಗಿವೆ.
ಕೋಟ ವೇಟಕ್ಕಾರು ಮಕ್ಕಾನ್ ದೇವಾಲಯದಲ್ಲಿ ಪುರಾತನವಾದ 20 ಚಿನ್ನದ ಆಭರಣಗಳು ಮತ್ತು ಶಿವ ದೇವಸ್ಥಾನದಲ್ಲಿ ಸುಮಾರು 35 ಚಿನ್ನದ ವಸ್ತುಗಳು ಕಾಣೆಯಾಗಿವೆ ಎಂಬ ಆರೋಪ ಕೇಳಿಬಂದಿವೆ. ಈ ಎಲ್ಲವೂ ಭಕ್ತರ ಕಾಣೆಕೆ ರೂಪದಲ್ಲಿ ದೇವಸ್ಥಾನಕ್ಕೆ ನೀಡಲಾಗಿತ್ತು.
ವೇಟಕ್ಕಾರು ಮಕ್ಕಾನ್ ದೇವಸ್ಥಾನವನ್ನು ಮಲಬಾರ್ ದೇವಸಂ ಮಂಡಳಿ ನಿರ್ವಹಿಸುತ್ತದೆ. ಈ ಮಂಡಳಿಯ ಮಾಜಿ ಕಾರ್ಯನಿರ್ವಾಹಕ ಅಧಿಕಾರಿಯೊಬ್ಬರು ಕದ್ದಿರಬಹುದು ಎಂದು ಅನುಮಾನ ವ್ಯಕ್ತಪಡಿಸಲಾಗಿದೆ. ಈ ಅಧಿಕಾರಿಗೆ ಮಂಡಳಿಯು ನೋಟಿಸ್ ಅನ್ನೂ ನೀಡಿದೆ. ಆಭರಣಗಳನ್ನು ಮಂಡಳಿಗೆ ಬುಧವಾರದ ಒಳಗೆ ಮುಟ್ಟಿಸುವುದಾಗಿ ಅಧಿಕಾರಿ ಹೇಳಿದ್ದರು. ಆದರೆ, ಅವರು ಮುಟ್ಟಿಸಲಿಲ್ಲ. ಆದ್ದರಿಂದ ಅವರ ವಿರುದ್ಧ ಮಂಡಳಿಯು ಪೊಲೀಸರಿಗೆ ದೂರು ನೀಡಿದೆ.
ಚಿನ್ನಾಭರಣಗಳು ಕಳವಾಗಿವೆ ಎಂದು ಮುಕ್ಕಂ ದೇವಾಲಯ ಸಮಿತಿಯೂ ಪೊಲೀಸರಿಗೆ ದೂರು ನೀಡಿದೆ. ದೇವಾಲಯದ ಹಿಂದಿನ ಸಮಿತಿಯ ಸದಸ್ಯರ ಮೇಲೆ ಅನುಮಾನವಿದೆ. ಚಿನ್ನಾಭರಣ ಕಳವಾಗಿದ್ದರ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಎರಡೂ ದೇವಸ್ಥಾನಗಳ ಚಿನ್ನಾಭರಣ ಕಳವಿನ ಬಗ್ಗೆ ಕಾಂಗ್ರೆಸ್ ಹಾಗೂ ಬಿಜೆಪಿ ಪ್ರತಿಭಟನೆ ನಡೆಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.