ADVERTISEMENT

ಬೀದಿ ಬದಿ ‘ಕಚೋರಿ’ ವ್ಯಾಪಾರಿಯ ವಾರ್ಷಿಕ ಆದಾಯ ₹60 ಲಕ್ಷಕ್ಕೂ ಹೆಚ್ಚು!

ಉತ್ತರ ಪ್ರದೇಶ: ವ್ಯಾಪಾರಿಗೆ ತೆರಿಗೆ ಇಲಾಖೆ ನೋಟಿಸ್

​ಪ್ರಜಾವಾಣಿ ವಾರ್ತೆ
Published 25 ಜೂನ್ 2019, 12:40 IST
Last Updated 25 ಜೂನ್ 2019, 12:40 IST
   

ಲಖನೌ: ಉತ್ತರ ಪ್ರದೇಶದ ಅಲಿಗಡದಲ್ಲಿ ಕಚೋರಿ, ಸಮೋಸ ಮಾರಾಟ ಮಾಡುವ ಬೀದಿ ಬದಿ ವ್ಯಾಪಾರಿಯೊಬ್ಬರ ವಾರ್ಷಿಕ ಆದಾಯವೆಷ್ಟು ಗೊತ್ತೇ? ₹60 ಲಕ್ಷಕ್ಕೂ ಹೆಚ್ಚು! ಈ ವ್ಯಾಪಾರಿಗೆ ಇದೀಗ ತೆರಿಗೆ ಇಲಾಖೆ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.

ಅಲಿಗಡದ ಸೀಮಾ ಟಾಕೀಸ್ ಸಮೀಪದಲ್ಲಿರುವ ‘ಮುಕೇಶ್ ಕಚೋರಿವಾಲಾ’ ಅಂಗಡಿಯ ಮಾಲೀಕ ಮುಕೇಶ್ ಕುಮಾರ್‌ 12 ವರ್ಷಗಳಿಂದ ಈ ವ್ಯಾಪಾರ ಮಾಡುತ್ತಿದ್ದಾರೆ. ಕಚೋರಿ, ಸಮೋಸ ರುಚಿಗೆ ಮಾರುಹೋದ ಗ್ರಾಹಕರು ದಿನವಿಡೀ ಅಂಗಡಿ ಮುಂದೆ ನೆರೆದಿರುತ್ತಾರೆ.

ಮುಕೇಶ್

ಈಚೆಗೆ ಇವರ ವ್ಯಾಪಾರ ಕುರಿತು ತೆರಿಗೆ ಇಲಾಖೆಗೆ ದೂರೊಂದು ಸಲ್ಲಿಕೆಯಾಗಿತ್ತು. ಇದಾದ ಬಳಿಕ ಮುಕೇಶ್ ಅಂಗಡಿ ಮೇಲೆ ಇಲಾಖೆ ಅಧಿಕಾರಿಗಳು ನಿಗಾ ಇರಿಸಿದ್ದರು.

ADVERTISEMENT

‘ಸಮೀಪದ ಅಂಗಡಿ ಬಳಿ ಕುಳಿತು, ಮುಕೇಶ್ ನಡೆಸುವ ವ್ಯಾಪಾರವನ್ನು ದಿನವಿಡೀ ಗಮನಿಸಿದೆವು. ಐದಾರು ದಿನ ನಿಗಾ ಇರಿಸಿದ ಬಳಿಕ ವಾರ್ಷಿಕ ₹60 ಲಕ್ಷದಿಂದ ₹1 ಕೋಟಿ ವಹಿವಾಟು ನಡೆಯುತ್ತಿದೆ ಎಂದು ಅಂದಾಜಿಸಲಾಯಿತು’ ಎಂದು ತೆರಿಗೆ ಇಲಾಖೆಯ ವಿಶೇಷ ತನಿಖಾ ದಳದ (ಎಸ್‌ಐಬಿ) ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ಅನ್ವಯ ನೋಂದಣಿ ಮಾಡಿಕೊಳ್ಳದೆ ಇರುವುದಕ್ಕೆ ಮತ್ತು ತೆರಿಗೆ ಪಾವತಿಸದೆ ಇರುವುದಕ್ಕಾಗಿ ಅವರಿಗೆ ನೋಟಿಸ್ ನೀಡಲಾಗಿದೆ ಎಂದು ಇಲಾಖೆ ಹೇಳಿದೆ.

‘ಕಾನೂನು ಪ್ರಕಾರ, ವಾರ್ಷಿಕ ₹40 ಲಕ್ಷಕ್ಕಿಂತ ಹೆಚ್ಚಿನ ವಹಿವಾಟು ಹೊಂದಿರುವವರು ಜಿಎಸ್‌ಟಿ ಅನ್ವಯ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯ. ಆಹಾರ ಉತ್ಪನ್ನಗಳಿಗೆ ಶೇ 5 ತೆರಿಗೆ ವಿಧಿಸಲಾಗುತ್ತದೆ’ ಎಂದು ಅಧಿಕಾರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.