ADVERTISEMENT

ಯುಪಿಎಸ್‌ಸಿ | 829 ಅಭ್ಯರ್ಥಿಗಳ ಆಯ್ಕೆ; ಹರಿಯಾಣದ ಪ್ರದೀಪ್ ಸಿಂಗ್ ಪ್ರಥಮ

ಮೊದಲ ಮೂರು ಸ್ಥಾನ ಪಡೆದವರು ಹಾಲಿ ಕೇಂದ್ರ ಸೇವೆಯ ಅಧಿಕಾರಿಗಳು

ಪಿಟಿಐ
Published 4 ಆಗಸ್ಟ್ 2020, 20:58 IST
Last Updated 4 ಆಗಸ್ಟ್ 2020, 20:58 IST
ಹರಿಯಾಣದ ಪ್ರದೀಪ್ ಸಿಂಗ್
ಹರಿಯಾಣದ ಪ್ರದೀಪ್ ಸಿಂಗ್   

ನವದೆಹಲಿ: ಕೇಂದ್ರ ಲೋಕಸೇವಾ ಆಯೋಗವು (ಯುಪಿಎಸ್‌ಸಿ) 2019ನೇ ಸಾಲಿನ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿದ್ದು, ಒಟ್ಟು 829 ಅಭ್ಯರ್ಥಿಗಳು ಕೇಂದ್ರ ಆಡಳಿತಾತ್ಮಕ ಸೇವೆಯ ಹುದ್ದೆಗಳಿಗೆ ನೇಮಕಗೊಳ್ಳಲು ಅರ್ಹತೆ ಪಡೆದಿದ್ದಾರೆ.

ಹರಿಯಾಣದ ಪ್ರದೀಪ್ ಸಿಂಗ್, ದೆಹಲಿಯ ಜತಿನ್ ಕಿಶೋರ್ ಮತ್ತು ಉತ್ತರ ಪ್ರದೇಶದ ಪ್ರತಿಭಾ ವರ್ಮಾ ಕ್ರಮವಾಗಿ ಮೊದಲ ಮೂರು ಸ್ಥಾನಗಳನ್ನು ಪಡೆದುಕೊಂಡಿದ್ದಾರೆ. ಈಮೂವರೂ ಹಾಲಿ ಐಎಎಸ್ ಯೇತರ ಸೇವೆಯಲ್ಲಿರುವ ಅಧಿಕಾರಿಗಳು. ಐಎಎಸ್ ಅಧಿಕಾರಿಯಾಗುವ ಗುರಿಯಿಂದ ಮತ್ತೆ ಪರೀಕ್ಷೆಗೆ ಹಾಜರಾಗಿದ್ದರು.

ಪ್ರಥಮ ಸ್ಥಾನ ಪಡೆದಿರುವ ಹರಿಯಾಣ ಮೂಲದ ಪ್ರದೀಪ್ ಸಿಂಗ್ 2019ನೇ ತಂಡದ ಐಆರ್‌ಎಸ್‌ ಅಧಿಕಾರಿ. ಸದ್ಯ ತರಬೇತಿಯಲ್ಲಿ ಇದ್ದಾರೆ.

ADVERTISEMENT

‘ಐಎಎಸ್‌ ಅಧಿಕಾರಿ ಆಗಬೇಕು ಎಂಬುದು ನನ್ನ ಕನಸು. ಅದೀಗ ನನಸಾಗಿದೆ. ಫಲಿತಾಂಶದಿಂದ ಆಶ್ಚರ್ಯವೂ ಆಗಿದೆ. ಸಮಾಜದ ನಿರ್ಲಕ್ಷ್ಯಿತ ವರ್ಗದವರ ಏಳಿಗೆಗಾಗಿ ಶ್ರಮಿಸುತ್ತೇನೆ’ ಎಂದು ಸಿಂಗ್ ಪ್ರತಿಕ್ರಿಯಿಸಿದ್ದಾರೆ.

ದ್ವಿತೀಯ ಸ್ಥಾನ ಪಡೆದಿರುವ ಕಿಶೋರ್ 2018ನೇ ತಂಡದ ಭಾರತೀಯ ಆರ್ಥಿಕ ಸೇವೆಯ (ಐಇಎಸ್) ಅಧಿಕಾರಿಯಾಗಿದ್ದು, ಸದ್ಯ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯದಲ್ಲಿ ನಿಯೋಜಿತರಾಗಿದ್ದಾರೆ. ಪ್ರತಿಭಾ ವರ್ಮಾ ಭಾರತೀಯ ಕಂದಾಯ ಸೇವೆಯ (ಆದಾಯ ಇಲಾಖೆ) ಅಧಿಕಾರಿ. ಇವರು 2018ರ ಪರೀಕ್ಷೆಯಲ್ಲಿ 489ನೇ ಸ್ಥಾನವನ್ನು ಗಳಿಸಿದ್ದರು.

ಆಯೋಗವು ಮಂಗಳವಾರ ಫಲಿತಾಂಶದ ವಿವರಗಳನ್ನು ಪ್ರಕಟಿಸಿದೆ.ಅರ್ಹತೆ ಪಡೆದಿರುವ 829 ಮಂದಿ ಅಭ್ಯರ್ಥಿಗಳಲ್ಲಿ 304 ಮಂದಿ ಸಾಮಾನ್ಯ ವರ್ಗದವರು. 78 ಮಂದಿ ಆರ್ಥಿಕವಾಗಿ ದುರ್ಬಲ ವರ್ಗಕ್ಕೆ (ಇಡಬ್ಲ್ಯೂಎಸ್) ಸೇರಿದ್ದರೆ, 251 ಮಂದಿ ಇತರೆ ಹಿಂದುಳಿದ ವರ್ಗ (ಒಬಿಸಿ), 129 ಮಂದಿ ಪರಿಶಿಷ್ಟ ಜಾತಿ, 67 ಮಂದಿ ಪರಿಶಿಷ್ಟ ಪಂಗಡದವರು ಎಂದು ಯುಪಿಎಸ್‌ಸಿ ತಿಳಿಸಿದೆ.

ಒಟ್ಟು 927 ಹುದ್ದೆಗಳಿಗಾಗಿ 2019ನೇ ಸಾಲಿನಲ್ಲಿ ಪರೀಕ್ಷೆಯನ್ನು ನಡೆಸಲಾಗಿತ್ತು. 11 ಅಭ್ಯರ್ಥಿಗಳ ಫಲಿತಾಂಶವನ್ನು ತಡೆಹಿಡಿಯಲಾಗಿದೆ ಎಂದು ಅಯೋಗ ತಿಳಿಸಿದೆ.

ಯುಪಿಎಸ್‌ಸಿ ವಾರ್ಷಿಕ ಮೂರು ಹಂತಗಳಲ್ಲಿ (ಪೂರ್ವಭಾವಿ, ಮುಖ್ಯ ಪರೀಕ್ಷೆ ಮತ್ತು ಸಂದರ್ಶನ) ಪರೀಕ್ಷೆ ನಡೆಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.