
ನವದೆಹಲಿ: ಕೇಂದ್ರ ಲೋಕಸೇವಾ ಆಯೋಗವು (ಯುಪಿಎಸ್ಸಿ) ತನ್ನ ಎಲ್ಲ ಪರೀಕ್ಷೆಗಳಲ್ಲಿ ಅಂಗವಿಕಲ ಅಭ್ಯರ್ಥಿಗಳಿಗೆ ‘ಆಯ್ಕೆಯ ಕೇಂದ್ರ’ವನ್ನು ಹಂಚಿಕೆ ಮಾಡಲು ನಿರ್ಧರಿಸಿದೆ.
ಅಂಗವಿಕಲ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ಪ್ರಯಾಣಿಸಲು, ತಂಗಲು ಹೆಚ್ಚಿನ ಸಮಸ್ಯೆ ಎದುರಿಸುತ್ತಾರೆ. ಅವರಿಗೆ ಅನುಕೂಲಕರವಾದ ಪರೀಕ್ಷಾ ಕೇಂದ್ರವನ್ನು ಆಯ್ಕೆ ಮಾಡಲು ಅವಕಾಶ ನೀಡುವುದಷ್ಟೇ ಅಲ್ಲದೆ, ಅವರು ಅರ್ಜಿಯಲ್ಲಿ ನಮೂದಿಸಿದ ಮೊದಲ ಕೇಂದ್ರವನ್ನು ಅವರಿಗೆ ನೀಡಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ನಿರ್ಧರಿಸಿದೆ. ಇದರಿಂದ ಅಂಗವಿಕಲ ವ್ಯಕ್ತಿಗಳು ಪರೀಕ್ಷೆಗೆ ಸುಲಭವಾಗಿ ಹಾಜರಾಗಲು ಸಹಕಾರಿಯಾಗಲಿದೆ.
‘ಕಳೆದ ಐದು ವರ್ಷಗಳ ಪರೀಕ್ಷಾ ಕೇಂದ್ರಗಳ ದತ್ತಾಂಶವನ್ನು ವಿಶ್ಲೇಷಿಸಿದ್ದು, ದೆಹಲಿ, ಕಠಕ್, ಪಟ್ನಾ, ಲಖನೌ ಮತ್ತು ಇತರ ಕೆಲ ಕೇಂದ್ರಗಳನ್ನು ಹೆಚ್ಚಿನ ಅಭ್ಯರ್ಥಿಗಳು ಆಯ್ಕೆ ಮಾಡುತ್ತಾರೆ. ಆ ಕೇಂದ್ರಗಳ ಸಾಮರ್ಥ್ಯಕ್ಕಿಂತ ಹೆಚ್ಚಿನ ಅಭ್ಯರ್ಥಿಗಳು ಆಯ್ಕೆ ಮಾಡಿರುವುದನ್ನು ಗಮನಿಸಲಾಗಿದೆ’ ಎಂದು ಯುಪಿಎಸ್ಸಿ ಅಧ್ಯಕ್ಷ ಅಜಯ್ ಕುಮಾರ್ ತಿಳಿಸಿದ್ದಾರೆ.
‘ಇಂತಹ ಕೇಂದ್ರಗಳನ್ನು ಆಯ್ಕೆ ಮಾಡಿಕೊಳ್ಳಲು ಅಂಗವಿಕಲ ಅಭ್ಯರ್ಥಿಗಳಿಗೆ ಸಾಧ್ಯವಾಗುವುದಿಲ್ಲ. ಅನಿವಾರ್ಯವಾಗಿ ದೂರದ ಕೇಂದ್ರಗಳನ್ನು ಆಯ್ಕೆ ಮಾಡಬೇಕಾಗುತ್ತದೆ. ಇನ್ನುಮುಂದೆ, ಇಂತಹ ಕೇಂದ್ರಗಳನ್ನು ಆಯ್ಕೆ ಮಾಡಿಕೊಳ್ಳಲು ಅಂಗವಿಕಲ ಅಭ್ಯರ್ಥಿಗಳಿಗೆ ಅವಕಾಶ ದೊರೆಯಲಿದೆ. ಅಲ್ಲದೆ, ಅವರ ಆಯ್ಕೆಯ ಕೇಂದ್ರವನ್ನು ನಿರಾಕರಿಸದಂತೆ ನೋಡಿಕೊಳ್ಳಲಾಗುತ್ತದೆ’ ಎಂದು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.