ADVERTISEMENT

ವಿವಾದಿತ ಪ್ರೊಬೇಷನರಿ IAS ಅಧಿಕಾರಿ ಡಾ. ಪೂಜಾ ಖೇಡ್ಕರ್ ವಿರುದ್ಧ UPSC ಎಫ್‌ಐಆರ್

ಪಿಟಿಐ
Published 19 ಜುಲೈ 2024, 9:31 IST
Last Updated 19 ಜುಲೈ 2024, 9:31 IST
<div class="paragraphs"><p>ಡಾ. ಪೂಜಾ ಖೇಡ್ಕರ್</p></div>

ಡಾ. ಪೂಜಾ ಖೇಡ್ಕರ್

   

ನವದೆಹಲಿ: ಅಂಗವೈಕಲ್ಯ (ಪಿಡಬ್ಲ್ಯುಬಿಡಿ) ಕೋಟಾವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿರುವ ವಿವಾದಿತ ಐಎಎಸ್‌ ಪ್ರೊಬೇಷನರಿ ಅಧಿಕಾರಿ ಡಾ.ಪೂಜಾ ಖೇಡ್ಕರ್‌ ವಿರುದ್ಧ ಕೇಂದ್ರ ಲೋಕಸೇವಾ ಆಯೋಗ ಪ್ರಕರಣ ದಾಖಲಿಸಿದೆ.

ಈ ಪ್ರಕರಣ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಆಯೋಗವು, 'ಪೂಜಾ ಅವರು ದುಷ್ಕೃತ್ಯದ ಮೂಲಕ ತಮಗೆ ಅನುಮತಿಸಿದ್ದ ಮಿತಿಯನ್ನು ಮೀರಿ ಹಲವು ಪ್ರಯತ್ನಗಳನ್ನು ಪಡೆದಿರುವುದು ತನಿಖೆಯಿಂದ ಗೊತ್ತಾಗಿದೆ. ಹೀಗಾಗಿ ಇವರ ನೇಮಕಾತಿಯನ್ನೇ ರದ್ದುಗೊಳಿಸುವಂತ ಗಂಭೀರ ಕ್ರಮ ಕೈಗೊಳ್ಳಲು ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ’ ಎಂದಿದೆ.

ADVERTISEMENT

‘ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ತಮಗೆ ಅನುಮತಿಸಿದ್ದ ಮಿತಿಗೂ ಮೀರಿದ ಪ್ರಯತ್ನ ಪಡೆಯಲು ಪೂಜಾ ಅವರು ನಕಲಿ ದಾಖಲೆಗಳನ್ನು ಸಲ್ಲಿಸಿರುವುದು ತನಿಖೆಯಿಂದ ತಿಳಿದುಬಂದಿದೆ. ಇದರಲ್ಲಿ ಅವರ ಹೆಸರು ಬದಲಾವಣೆ, ತಂದೆ ಹಾಗೂ ತಾಯಿಯ ಹೆಸರು ಬದಲಿಸಿರುವುದು, ಭಾವಚಿತ್ರ ಬದಲಾವಣೆ ಹಾಗೂ ಸಹಿ ಮತ್ತು ಇ–ಮೇಲ್ ವಿಳಾಸ, ಮೊಬೈಲ್‌ ಮತ್ತು ಮನೆಯ ವಿಳಾಸವನ್ನು ಬದಲಿಸುವ ಮೂಲಕ ತಮ್ಮ ಗುರುತು ಮರೆಮಾಚಿ ಆಯೋಗವನ್ನು ವಂಚಿಸಿದ್ದಾರೆ’ ಎಂದು ಆರೋಪಿಸಲಾಗಿದೆ.

ಪುಣೆ ಪೊಲೀಸರಿಂದ ನಡೆದ ತನಿಖೆ

ಐಎಎಸ್‌ ಪ್ರೊಬೇಷನರಿ ಅಧಿಕಾರಿ ಡಾ.ಪೂಜಾ ಖೇಡ್ಕರ್‌ ಅವರು ಸಲ್ಲಿಸಿದ ವೈದ್ಯಕೀಯ ಪ್ರಮಾಣಪತ್ರಗಳ ಸತ್ಯಾಸತ್ಯತೆ ಬಗ್ಗೆ ಪುಣೆ ಪೊಲೀಸರು ತನಿಖೆ ನಡೆಸಿದ್ದಾರೆ. ಖೇಡ್ಕರ್ ಅವರು ಸಲ್ಲಿಸಿದ ವೈದ್ಯಕೀಯ ಪ್ರಮಾಣಪತ್ರಗಳನ್ನು ಪರಿಶೀಲಿಸುವಂತೆ ಪುಣೆಯ ಪೊಲೀಸರು ಮತ್ತು ಜಿಲ್ಲಾಧಿಕಾರಿಗಳಿಗೆ ಅಂಗವಿಕಲ ಆಯುಕ್ತರ ಕಾರ್ಯಾಲಯವು ಪತ್ರ ಬರೆದಿತ್ತು.

ಪೂಜಾ ಖೇಡ್ಕರ್ ಅವರು ಸಲ್ಲಿಸಿದ ಪ್ರಮಾಣಪತ್ರಗಳು ಪ್ರಾಮಾಣಿಕವಾಗಿವೆಯೇ ಎಂಬುದರ ಕುರಿತು ಅಧಿಕಾರಿಗಳು ತನಿಖೆ ಕೈಗೊಂಡಿದ್ದರು. ಈ ಪ್ರಮಾಣ ಪತ್ರಗಳನ್ನು ಯಾವ ವೈದ್ಯರು ಮತ್ತು ಆಸ್ಪತ್ರೆಗಳಿಂದ ಪಡೆಯಲಾಗಿದೆ ಎಂಬುದರ ಕುರಿತು ಪೊಲೀಸರು ತನಿಖೆ ನಡೆಸಿದ್ದಾರೆ. 

2023ನೇ ಸಾಲಿನ ಐಎಎಸ್ ಅಧಿಕಾರಿಯಾಗಿರುವ ಖೇಡ್ಕರ್ ಅವರನ್ನು ಸದ್ಯ ವಾಶೀಂ ಜಿಲ್ಲೆಗೆ ಮಹಾರಾಷ್ಟ್ರ ಸರ್ಕಾರ ವರ್ಗಾವಣೆ ಮಾಡಿದೆ. ಅವರು ಕೇಂದ್ರ ಲೋಕಸೇವಾ ಆಯೋಗಕ್ಕೆ ಸಲ್ಲಿಸಿದ ವೈದ್ಯಕೀಯ ಪ್ರಮಾಣ ಪತ್ರದಲ್ಲಿ ತಾವು ಭಾಗಶಃ ಅಂಗವೈಕಲ್ಯದಿಂದ ಬಳಲುತ್ತಿರುವುದಾಗಿ ಹೇಳಿದ್ದಾರೆ.

ಅಂಗವೈಕಲ್ಯದ ಕೋಟಾ ಜತೆಗೆ, ಇತರೆ ಹಿಂದುಳಿದ ವರ್ಗಗಳಡಿ ಮೀಸಲಾತಿ ಮತ್ತು ಪುಣೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾಗ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡ ಆರೋಪ ಎದುರಿಸುತ್ತಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.