ADVERTISEMENT

ಬಾಲ್ಟಿಮೋರ್ ಸೇತುವೆ ದುರಂತ: ಹಡಗಿನಲ್ಲಿದ್ದ ಭಾರತೀಯರ ವಿಚಾರಣೆ ಆರಂಭಿಸಿದ NTSB

ಪಿಟಿಐ
Published 28 ಮಾರ್ಚ್ 2024, 15:40 IST
Last Updated 28 ಮಾರ್ಚ್ 2024, 15:40 IST
<div class="paragraphs"><p>ಅಮೆರಿಕದ ಬಾಲ್ಟಿಮೋರ್‌ ಬಳಿ ಸೇತುವೆಗೆ ಡಿಕ್ಕಿ ಹೊಡೆದ ಹಡಗಿನ ಕುರಿತು&nbsp;ಅಮೆರಿಕದ ರಾಷ್ಟ್ರೀಯ ಸಂಚಾರ ಸುರಕ್ಷತಾ ಮಂಡಳಿಯ (NTSB) ಅಧಿಕಾರಿಗಳು ಕೈಗೊಂಡರು</p></div>

ಅಮೆರಿಕದ ಬಾಲ್ಟಿಮೋರ್‌ ಬಳಿ ಸೇತುವೆಗೆ ಡಿಕ್ಕಿ ಹೊಡೆದ ಹಡಗಿನ ಕುರಿತು ಅಮೆರಿಕದ ರಾಷ್ಟ್ರೀಯ ಸಂಚಾರ ಸುರಕ್ಷತಾ ಮಂಡಳಿಯ (NTSB) ಅಧಿಕಾರಿಗಳು ಕೈಗೊಂಡರು

   

ರಾಯಿಟರ್ಸ್ ಚಿತ್ರ

ನವದೆಹಲಿ: ಅಮೆರಿಕದ ಮೆರಿಲ್ಯಾಂಡ್‌ ಪ್ರದೇಶದ ಬಾಲ್ಟಿಮೋರ್‌ನ ಫ್ರಾನ್ಸಿಸ್‌ ಸ್ಕಾಟ್ ಕೀ ಸೇತುವೆ ಕುಸಿತ ದುರಂತಕ್ಕೆ ಕಾರಣವಾದ ಸರಕು ಸಾಗಣೆ ಹಡಗು ಡಾಲಿಯಲ್ಲಿದ್ದ ಭಾರತೀಯರನ್ನೂ ಒಳಗೊಂಡ ಸಿಬ್ಬಂದಿಯ ವಿಚಾರಣೆಯನ್ನು ಅಮೆರಿಕದ ರಾಷ್ಟ್ರೀಯ ಸಂಚಾರ ಸುರಕ್ಷತಾ ಮಂಡಳಿಯ (NTSB) ಅಧಿಕಾರಿಗಳು ಆರಂಭಿಸಿದ್ದಾರೆ.

ADVERTISEMENT

ಪಟಾಪ್ಸ್ಕೊ ನದಿಯಲ್ಲಿ ಸಾಗುತ್ತಿದ್ದ 984 ಅಡಿ ಉದ್ದದ ಹಡಗು 2.6 ಕಿ.ಮೀ. ಉದ್ದದ ಸೇತುವೆಯ ಆಧಾರ ಸ್ತಂಭಕ್ಕೆ ಮಾರ್ಚ್ 26ರಂದು ಡಿಕ್ಕಿ ಹೊಡೆದ ಪರಿಣಾಮ ಅದು ಸಂಪೂರ್ಣ ಕುಸಿದಿತ್ತು.

‘ಘಟನೆ ನಂತರ ಹಡಗು ಪ್ರವೇಶಿಸಿದ ಸುರಕ್ಷತಾ ಮಂಡಳಿಯ ಅಧಿಕಾರಿಗಳು, ಅದರಲ್ಲಿದ್ದ ದಾಖಲೆಗಳು, ಪ್ರಯಾಣದ ಮಾಹಿತಿ ಹಾಗೂ ಇನ್ನಿತರ ಸಾಕ್ಷಿಗಳನ್ನು ತನಿಖೆಗಾಗಿ ವಶಪಡಿಸಿಕೊಂಡಿದ್ದಾರೆ’ ಎಂದು ಡಾಲಿ ಮಾಲೀಕತ್ವ ಹೊಂದಿರುವ ಸಿಂಗಪುರ ಮೂಲದ ಸಿನರ್ಜಿ ಸಮೂಹದ ಹಡಗು ಕಂಪನಿ ಹೇಳಿದೆ.

‘ಸಿಬ್ಬಂದಿಯ ವಿಚಾರಣೆ ಆರಂಭವಾಗಿದೆ. ತನಿಖೆಯ ಎಲ್ಲಾ ಹಂತಗಳಲ್ಲೂ ಸಹಕರಿಸಲಾಗುತ್ತಿದೆ’ ಎಂದಿದೆ.

ಸೇತುವೆಗೆ ಡಿಕ್ಕಿಯಾಗುವ ಸಂದರ್ಭದಲ್ಲಿ ಹಡಗಿನ ಸಿಬ್ಬಂದಿ ಜತೆಗೆ ಇಬ್ಬರು ಪೈಲಟ್‌ಗಳು ಇದ್ದರು. ಗಾಯಗೊಂಡ ಸಿಬ್ಬಂದಿಗೆ ಚಿಕಿತ್ಸೆ ನೀಡಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಒತ್ತಡದಲ್ಲಿರುವ ಸಿಬ್ಬಂದಿಯ ಮಾನಸಿಕ ಆರೋಗ್ಯ ಕಾಳಜಿ ವಹಿಸುವಂತೆ ಹಡಗಿನ ವ್ಯವಸ್ಥಾಪಕರಿಗೆ ಸೂಚಿಸಲಾಗಿದೆ ಎಂದು ಕಂಪನಿ ಹೇಳಿದೆ.

‘ಸರಕು ಸಾಗಣೆಯ ಡಾಲಿ ಹಡಗಿನಲ್ಲಿ 20 ಭಾರತೀಯರು ಇದ್ದರು. ಅವರೊಂದಿಗೆ ಅಮೆರಿಕದ ರಾಯಭಾರ ಕಚೇರಿಯ ಸಿಬ್ಬಂದಿ ಹಾಗೂ ಸ್ಥಳೀಯ ಸಿಬ್ಬಂದಿ ಸಂಪರ್ಕದಲ್ಲಿದ್ದಾರೆ’ ಎಂದು ಭಾರತೀಯ ವಿದೇಶಾಂಗ ಸಚಿವಾಲಯ ಹೇಳಿದೆ.

‘ಹಡಗಿನಲ್ಲಿ ಒಟ್ಟು 21 ಸಿಬ್ಬಂದಿ ಇದ್ದರು. ಅವರಲ್ಲಿ 20 ಜನ ಭಾರತೀಯರು ಸೇರಿದ್ಧಾರೆ. ಅವರೆಲ್ಲರೂ ಆರೋಗ್ಯವಾಗಿದ್ದಾರೆ. ಅವರನ್ನು ಮರಳಿ ಹಡಗಿಗೆ ಕಳುಹಿಸಲಾಗಿದೆ’ ಎಂದು ವಿದೇಶಾಂಗ ವ್ಯವಹಾರಗಳ ಇಲಾಖೆಯ ವಕ್ತಾರ ರಂಧೀರ್ ಜೈಸ್ವಾಲ್ ತಿಳಿಸಿದ್ದಾರೆ.

ಘಟನೆ ಕುರಿತು ಎಕ್ಸ್‌ ವೇದಿಕೆಯಲ್ಲಿ ಪ್ರತಿಕ್ರಿಯಿಸಿರುವ ವಾಷಿಂಗ್ಟನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು, ‘ಬಾಲ್ಟಿಮೋರ್ ದುರಂತ ಅತ್ಯಂತ ದುರದೃಷ್ಟಕರ. ಫ್ರಾನ್ಸಿಸ್‌ ಸ್ಕಾಟ್ ಕೀ ಸೇತುವೆ ಕುಸಿತದಲ್ಲಿ ತೊಂದರೆಗೀಡಾದ ಪ್ರತಿಯೊಬ್ಬರಿಗೂ ನಮ್ಮ ಸಂತಾಪಗಳು’ ಎಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.