ADVERTISEMENT

ತಾಲಿಬಾನ್ ಮೇಲೆ ಅಮೆರಿಕ ಪಡೆಗಳ ವಾಯುದಾಳಿ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2020, 5:22 IST
Last Updated 13 ಅಕ್ಟೋಬರ್ 2020, 5:22 IST
ಹೆಲ್ಮಂಡ್ ಪ್ರಾಂತ್ಯದಲ್ಲಿ ಅಮೆರಿಕ ಪಡೆಗಳ ಗಸ್ತು (ಸಂಗ್ರಹ ಚಿತ್ರ).
ಹೆಲ್ಮಂಡ್ ಪ್ರಾಂತ್ಯದಲ್ಲಿ ಅಮೆರಿಕ ಪಡೆಗಳ ಗಸ್ತು (ಸಂಗ್ರಹ ಚಿತ್ರ).   

ಲಷ್ಕರ್ ಗಾಹ್ (ಅಫ್ಗಾನಿಸ್ತಾನ): ಅಫ್ಗಾನಿಸ್ತಾನದ ಭದ್ರತಾ ಪಡೆಗಳ ನೆರವಿನೊಂದಿಗೆ ಅಮೆರಿಕದ ಪಡೆಗಳು ತಾಲಿಬಾನ್‌ನ ಮೇಲೆ ಹೆಲ್ಮಂಡ್ ಪ್ರಾಂತ್ಯದಲ್ಲಿ ಅನೇಕ ಬಾರಿ ವಾಯುದಾಳಿ ನಡೆಸಿವೆ ಎಂದು ಅಮೆರಿಕ ಸೇನೆ ವಕ್ತಾರರು ಸೋಮವಾರ ಇಲ್ಲಿ ತಿಳಿಸಿದರು.

ಕರ್ನಲ್ ಸಾನ್ನಿ ಲೆಜೆಟ್ ಅವರು, ‘ತಾಲಿಬಾನ್‌ ಪಡೆಗಳು ಇತ್ತೀಚೆಗೆ ಹೆಲ್ಮೆಂಡ್‌ ಪ್ರಾಂತ್ಯದ ವಿವಿಧೆಡೆ ದಾಳಿ ನಡೆಸಿದ್ದವು. ಇದು, ಈಚೆಗೆ ಆಗಿದ್ದ ಅಮೆರಿಕ –ತಾಲಿಬಾನ್ ನಡುವಿನ ಒಪ್ಪಂದಕ್ಕೆ ವಿರುದ್ಧವಾಗಿದ್ದವು. ಅಲ್ಲದೆ, ಶಾಂತಿ ಮಾತುಕತೆಯ ಮೇಲೂ ಪ್ರತಿಕೂಲ ಪರಿಣಾಮ ಬೀರುವಂತಿದ್ದವು. ಈಗ ನಡೆಸಿರುವ ವಾಯುದಾಳಿಯಿಂದ ಫೆಬ್ರುವರಿಯಲ್ಲಿ ಆಗಿದ್ದ ಒಡಂಬಡಿಕೆಯ ಉಲ್ಲಂಘನೆಯಾಗಿಲ್ಲ‘ ಎಂದು ತಿಳಿಸಿದರು.

‘ಹೆಲ್ಮೆಂಡ್‌ ಪ್ರಾಂತ್ಯದಲ್ಲಿ ಕೈಗೊಂಡಿರುವ ಆಕ್ರಮಣಕಾರಿ ದಾಳಿಯನ್ನು ತಾಲಿಬಾನ್‌ ತಕ್ಷಣ ನಿಲ್ಲಿಸಬೇಕು. ಮತ್ತು ದೇಶದ ವಿವಿಧೆಡೆ ಕೈಗೊಂಡಿರುವ ಹಿಂಸಾಕೃತ್ಯಗಳನ್ನು ತಗ್ಗಿಸಬೇಕು’ ಎಂದು ಲೆಜೆಂಟ್, ಕಮಾಂಡರ್ ಸ್ಕಾಟ್ ಮಿಲ್ಲರ್‌ರನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ್ದಾರೆ.

ADVERTISEMENT

ಅಫ್ಗನ್ ರಾಷ್ಟ್ರೀಯ ಭದ್ರತಾ ಪಡೆಗಳಿಗೆ ದೇಶದ ರಕ್ಷಣೆಗಾಗಿ ಅಗತ್ಯ ಬೆಂಬಲವನ್ನು ಅಮೆರಿಕದ ಪಡೆಗಳು ಮುಂದುವರಿಸಲಿವೆ ಎಂದು ಅವರು ಸ್ಪಷ್ಟಪಡಿಸಿದರು.

ಹೆಲ್ಮೆಂಡ್‌ ಪ್ರಾಂತ್ಯದ ರಾಜಧಾನಿ ಲಷ್ಕರ್ ಗಾಹ್‌ನಲ್ಲಿ ಸೋಮವಾರ ಗುಂಡಿನ ಚಕಮಕಿ, ದಾಳಿ ಪ್ರಕರಣಗಳ ಹಿಂದೆಯೇ ವಾಯುದಾಳಿ ಕುರಿತು ಅಮೆರಿಕ ಹೇಳಿಕೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.