ನವದೆಹಲಿ: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಆಡಳಿತದ ಮುಖ್ಯ ಸಮಾಲೋಚಕ ಬ್ರೆಂಡನ್ ಲಿಂಚ್ ಇಂದು ರಾತ್ರಿ ಭಾರತಕ್ಕೆ ಆಗಮಿಸುತ್ತಿದ್ದು, ಭಾರತ-ಅಮೆರಿಕ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಕುರಿತು ನಾಳೆ ದಿನವಿಡೀ ಮಾತುಕತೆ ನಡೆಸಲಿದ್ದಾರೆ.
ಅಮೆರಿಕವು ಭಾರತೀಯ ಸರಕುಗಳ ಮೇಲೆ ಶೇ 50 ರಷ್ಟು ಆಮದು ಸುಂಕವನ್ನು ವಿಧಿಸಿದ ನಂತರ ಈ ಒಪ್ಪಂದದ ಮೇಲೆ ಪರಿಣಾಮ ಬೀರಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಉಭಯ ದೇಶಗಳ ನಡುವಿನ ವ್ಯಾಪಾರ ಸಂಬಂಧಗಳ ಬಗ್ಗೆ ಸಕಾರಾತ್ಮಕ ಮಾತುಗಳನ್ನಾಡಿದ್ದದ್ದರು. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸಹ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ ಕೆಲವು ದಿನಗಳ ನಂತರ ಈ ಸಭೆ ನಡೆಯುತ್ತಿದೆ.
ಭಾರತ-ಅಮೆರಿಕ ದ್ವಿಪಕ್ಷೀಯ ವ್ಯಾಪಾರ ಒಪ್ಪಂದಗಳಿಗಾಗಿ(ಬಿಟಿಎ) ಐದು ಸುತ್ತಿನ ಮಾತುಕತೆಗಳು ನಡೆದಿವೆ. ಆಗಸ್ಟ್ 25ರಿಂದ 29ರವರೆಗೆ ನಿಗದಿಪಡಿಸಲಾಗಿದ್ದ ಆರನೇ ಸುತ್ತಿನ ಮಾತುಕತೆಯನ್ನು ಅಮೆರಿಕವು ಭಾರತೀಯ ಸರಕುಗಳ ಮೇಲೆ ಶೇ 50ರಷ್ಟು ಸುಂಕ ವಿಧಿಸಿದ ಹಿನ್ನೆಲೆ ಮುಂದೂಡಲಾಗಿತ್ತು.
‘ಈ ಹಿಂದೆಯೂ ಸಹ ಚರ್ಚೆಗಳು ನಡೆದಿವೆ. ಅಮೆರಿಕದ ಮುಖ್ಯ ಸಮಾಲೋಚಕರು ಇಂದು ರಾತ್ರಿ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ. ನಾಳೆ ಮಾತುಕತೆ ನಡೆಸಿದ್ದಾರೆ. ಇದು ಖಂಡಿತವಾಗಿಯೂ ವ್ಯಾಪಾರ ಮಾತುಕತೆಗಳ ಕುರಿತಾದ ಚರ್ಚೆಯಾಗಿದೆ. ಭಾರತ ಮತ್ತು ಅಮೆರಿಕ ನಡುವೆ ಒಪ್ಪಂದಕ್ಕೆ ಬರಲು ಏನು ಮಾಡಬಹುದು ಎಂಬುದನ್ನು ಚರ್ಚಿಸುತ್ತೇವೆ’ಎಂದು ಭಾರತದ ಮುಖ್ಯ ಸಮಾಲೋಚಕ ಮತ್ತು ವಾಣಿಜ್ಯ ಸಚಿವಾಲಯದ ವಿಶೇಷ ಕಾರ್ಯದರ್ಶಿ ರಾಜೇಶ್ ಅಗರ್ವಾಲ್ ಸೋಮವಾರ ಹೇಳಿದ್ದಾರೆ.
ಭಾರತ ಮತ್ತು ಅಮೆರಿಕ ವಾರಕ್ಕೊಮ್ಮೆ ವರ್ಚುವಲ್ ಮೋಡ್ ಮೂಲಕ ಚರ್ಚೆಗಳಲ್ಲಿ ತೊಡಗಿಸಿಕೊಂಡಿವೆ ಎಂದೂ ಅವರು ತಿಳಿಸಿದ್ದಾರೆ.
‘ಚರ್ಚೆಗಳು ನಡೆಯುತ್ತಿವೆ. ಆದರೆ, ಒಟ್ಟಾರೆ ಪರಿಸರ ಅನುಕೂಲಕರವಾಗಿಲ್ಲದ ಕಾರಣ ನಾವು ಹೆಚ್ಚು ಪ್ರಗತಿ ಸಾಧಿಸುತ್ತಿಲ್ಲ. ಈಗ ನಮಗೆ ಒಂದು ಅವಕಾಶ ಸಿಕ್ಕಿದೆ’ಎಂದು ಅಧಿಕಾರಿ ಹೇಳಿದ್ದಾರೆ.
ಲಿಂಚ್ ಅವರು ದಕ್ಷಿಣ ಮತ್ತು ಮಧ್ಯ ಏಷ್ಯಾದ ಅಮೆರಿಕದ ಸಹಾಯಕ ವ್ಯಾಪಾರ ಪ್ರತಿನಿಧಿಯಾಗಿದ್ದಾರೆ.
ಅವರು ಈ ಪ್ರದೇಶದ 15 ದೇಶಗಳಿಗೆ ಸಂಬಂಧಿಸಿದಂತೆ ಅಮೆರಿಕದ ವ್ಯಾಪಾರ ನೀತಿಯ ಅಭಿವೃದ್ಧಿ ಮತ್ತು ಅನುಷ್ಠಾನವನ್ನು ನೋಡಿಕೊಳ್ಳುತ್ತಾರೆ. ಇದರಲ್ಲಿ ಅಮೆರಿಕ-ಭಾರತ ವ್ಯಾಪಾರ ನೀತಿ ವೇದಿಕೆಯ (ಟಿಆರ್‌ಎಫ್) ನಿರ್ವಹಣೆ ಮತ್ತು ಪ್ರಾದೇಶಿಕ ಪಾಲುದಾರರೊಂದಿಗೆ ವ್ಯಾಪಾರ ಮತ್ತು ಹೂಡಿಕೆ ಚೌಕಟ್ಟಿನ ಒಪ್ಪಂದಗಳ (ಟಿಐಎಫ್‌ಎ) ಅಡಿಯಲ್ಲಿ ಚಟುವಟಿಕೆಗಳ ಸಮನ್ವಯವೂ ಸೇರಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.