ADVERTISEMENT

ನಮ್ಮೊಂದಿಗೆ ಕೆಲಸ ಮಾಡಿ; ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್‌ ಅಭಿಮತ

ಪಿಟಿಐ
Published 23 ಏಪ್ರಿಲ್ 2025, 0:53 IST
Last Updated 23 ಏಪ್ರಿಲ್ 2025, 0:53 IST
ರಾಜಸ್ಥಾನದ ಅಮೆರ್‌ ಕೋಟೆಯಲ್ಲಿ ಸಾಂಪ್ರದಾಯಿಕ ನೃತ್ಯವನ್ನು ಪ್ರದರ್ಶಿಸುವ ಮೂಲಕ ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್‌ ಮತ್ತು ಅವರ ಕುಟುಂಬದವರನ್ನು ಸ್ವಾಗತಿಸಲಾಯಿತು –ಎಎಫ್‌ಪಿ ಚಿತ್ರ
ರಾಜಸ್ಥಾನದ ಅಮೆರ್‌ ಕೋಟೆಯಲ್ಲಿ ಸಾಂಪ್ರದಾಯಿಕ ನೃತ್ಯವನ್ನು ಪ್ರದರ್ಶಿಸುವ ಮೂಲಕ ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್‌ ಮತ್ತು ಅವರ ಕುಟುಂಬದವರನ್ನು ಸ್ವಾಗತಿಸಲಾಯಿತು –ಎಎಫ್‌ಪಿ ಚಿತ್ರ   

ಜೈಪುರ: ‘ಅಮೆರಿಕ ಮತ್ತು ಭಾರತವು ಒಟ್ಟಿಗೆ ಯಶಸ್ವಿಯಾಗಿ ಕೆಲಸ ಮಾಡಿದರೆ, 21ನೇ ಶತಮಾನವು ಶ್ರೀಮಂತವಾಗಿ ಶಾಂತಿಯುತವಾಗಿ ಇರಲಿದೆ. ಒಂದು ವೇಳೆ ಒಟ್ಟಿಗೆ ಕೆಲಸ ಮಾಡಲು ಸೋತರೆ, 21ನೇ ಶತಮಾನದಲ್ಲಿ ಮಾನವತೆಗೆ ಕರಾಳ ಛಾಯೆ ಬಂದೊದಗಬಹುದು’ ಎಂದು ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್‌ ಅಭಿಪ್ರಾಯಪಟ್ಟರು.

ಜೆ.ಡಿ. ವ್ಯಾನ್ಸ್‌ ಹಾಗೂ ಅವರ ಕುಟುಂಬವು ನಾಲ್ಕು ದಿನಗಳ ಭಾರತ ಪ್ರವಾಸದಲ್ಲಿದ್ದಾರೆ. ಮಂಗಳವಾರ ಬೆಳಿಗ್ಗೆ ವ್ಯಾನ್ಸ್‌ ಹಾಗೂ ಅವರ ಕುಟುಂಬವು ರಾಜಸ್ಥಾನದ ಅಮೆರ್‌ ಕೋಟೆಗೆ ಭೇಟಿ ನೀಡಿದ್ದರು. ಬಳಿಕ ಇಲ್ಲಿನ ‘ರಾಜಸ್ಥಾನ ಅಂತರರಾಷ್ಟ್ರೀಯ ಕೇಂದ್ರ’ದಲ್ಲಿ ಭಾರತ–ಅಮೆರಿಕ ಸಂಬಂಧದ ಕುರಿತು ಮಾತನಾಡಿದರು.

‘ನಿಮ್ಮ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡಲು ಹೆಚ್ಚಿನ ಅವಕಾಶ ನೀಡಿ. ಸುಂಕ ಏತರ ತೊಡಕುಗಳನ್ನು ನಿವಾರಿಸಿ. ಅಮೆರಿಕದ ರಕ್ಷಣಾ ಯಂತ್ರಗಳನ್ನು ಮತ್ತು ಇಂಧನ ಉತ್ಪನ್ನಗಳನ್ನು ಖರೀದಿಸಿ. 21ನೇ ಶತಮಾನದ ಭವಿಷ್ಯವು ನಮ್ಮ ಎರಡು ದೇಶಗಳ ಬಲಗಳ ಮೇಲೆ ನಿಂತಿವೆ’ ಎಂದರು.

ADVERTISEMENT

‘ಭಾರತವು ತನ್ನಲ್ಲಿ ಇರುವ ನೈಸರ್ಗಿಕ ಸಂಪನ್ಮೂಲಗಳನ್ನು ಕಂಡುಕೊಳ್ಳಲು ನಾವು ಸಹಕಾರ ನೀಡುತ್ತೇವೆ. ಸಮುದ್ರದಾಳದ ಅನಿಲ ನಿಕ್ಷೇಪವನ್ನು ಹುಡುಕಲು ಮತ್ತು ಖನಿಜ ಸರಬರಾಜಿನಲ್ಲಿಯೂ ನಾವು ಸಹಾಯ ಮಾಡುತ್ತೇವೆ. ಭಾರತದೊಂದಿಗೆ ಶಕ್ತಿಯುತ ಒಪ್ಪಂದ ಏರ್ಪಡಲು ಅಧ್ಯಕ್ಷ ಟ್ರಂಪ್‌ ಅವರು ಎದುರು ನೋಡುತ್ತಿದ್ದಾರೆ’ ಎಂದರು.

‘ಭಾರತವು ವ್ಯಾಪಾರ ಮಾಡಲು ಬಹಳ ಅನುಕೂಲಕರ ದೇಶ. ನಿಮ್ಮ ಮಾರುಕಟ್ಟೆಯಲ್ಲಿ ನಮಗೆ ಹೆಚ್ಚಿನ ಅವಕಾಶ ನೀಡಿ. ಭಾರತದಲ್ಲಿ ವ್ಯವಹರಿಸಲು ನಮ್ಮ ದೇಶದ ಜನರಿಗೆ ಹೆಚ್ಚಿನ ಅವಕಾಶ ಮಾಡಿಕೊಡುತ್ತೇವೆ. ಭಾರತೀಯರೂ ನಮ್ಮಲ್ಲಿಗೆ ಬರಬಹುದು’ ಎಂದರು.

ನನ್ನ ಮಕ್ಕಳಿಗೆ ಮೋದಿ ಅಂದರೆ ಇಷ್ಟ: ವ್ಯಾನ್ಸ್‌

* ಮೋದಿ ಅವರ ಆತಿಥ್ಯದಿಂದ ನಮಗೆ ಬಹಳ ಸಂತೋಷವಾಗಿದೆ. ನನ್ನ ಮಕ್ಕಳಿಗೆ ಅವರು ಇಷ್ಟವಾದರು. ನನ್ನ ಮಕ್ಕಳಿಗೆ ಮೊದಲಿಗೆ ಟ್ರಂಪ್‌ ಅವರು ಇಷ್ಟವಾಗಿದ್ದರು. ಈಗ ಮೋದಿ ಅಂದರೆ ಇಷ್ಟ. ಅವರ ಆತಿಥ್ಯವನ್ನು ನೋಡಿ ‘ನಾನು ಭಾರತದಲ್ಲಿಯೇ ಉಳಿದುಬಿಡುತ್ತೇನೆ’ ಎಂದು ನನ್ನ ಮಗ ಹೇಳಿದ. ಆದರೆ ಜೈಪುರಕ್ಕೆ ಬಂದ ಬಳಿಕ ಇಲ್ಲಿನ ಸೂರ್ಯಶಾಖವನ್ನು ನೋಡಿ ‘ನಾವು ಇಂಗ್ಲೆಡ್‌ಗೆ ಹೋಗಬೇಕು ಅನಿಸುತ್ತದೆ’ ಎಂದು ಹೇಳಿದ

* ನನ್ನ ಪತ್ನಿ ಹುಟ್ಟೂರಿಗೆ ಇದೇ ಮೊದಲ ಬಾರಿ ಬರುತ್ತಿದ್ದೇನೆ. ನನಗಿಂತ ಭಾರತದಲ್ಲಿ ಅವಳೇ ಸೆಲೆಬ್ರಿಟಿ ಆಗಿದ್ದಾಳೆ. ಈ ದೇಶದ ವಾಸ್ತುಶಿಲ್ಪದ ಸೌಂದರ್ಯಕ್ಕೆ ಇಲ್ಲಿನ ಇತಿಹಾಸ ಮತ್ತು ಪರಂಪರೆಗೆ ನಾನು ಮಾರು ಹೋಗಿದ್ದೇನೆ * ಮೋದಿ ಅವರಂತು ಕಠಿಣ ಸಂಧಾನಕಾರರೇ ಸರಿ. ಅವರು ಬಹಳ ಚೌಕಾಸಿ ಮಾಡುತ್ತಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.