ADVERTISEMENT

ಅಮೆರಿಕ ನಿಲುವಿಗೆ ಭಾರತದ ಪರೋಕ್ಷ ಬೆಂಬಲ

‘ದಕ್ಷಿಣ ಚೀನಾ ಸಮುದ್ರ’ದ ಮೇಲೆ ಚೀನಾ ಹಕ್ಕು ಸ್ಥಾಪನೆ ಕಾನೂನುಬಾಹಿರ: ಅಮೆರಿಕ

​ಪ್ರಜಾವಾಣಿ ವಾರ್ತೆ
Published 15 ಜುಲೈ 2020, 7:57 IST
Last Updated 15 ಜುಲೈ 2020, 7:57 IST
ದಕ್ಷಿಣ ಚೀನಾ ಸಮುದ್ರ (ಕೃಪೆ: ಎಎಫ್‌ಪಿ)
ದಕ್ಷಿಣ ಚೀನಾ ಸಮುದ್ರ (ಕೃಪೆ: ಎಎಫ್‌ಪಿ)   

ನವದೆಹಲಿ: ದಕ್ಷಿಣ ಚೀನಾ ಸಮುದ್ರದ ಬಹುತೇಕ ಭಾಗದ ಮೇಲೆ ಹಕ್ಕು ಪ್ರತಿಪಾದಿಸುತ್ತಿರುವ ಚೀನಾದ ನಡೆ ಸಂಪೂರ್ಣ ಕಾನೂನುಬಾಹಿರ ಎಂದು ಅಮೆರಿಕ ಮಂಗಳವಾರ ಹೇಳಿದೆ.ಚೀನಾ ಸರ್ಕಾರ ತನ್ನ ಕಡಲಗಡಿ ವಿಸ್ತರಿಸಿಕೊಳ್ಳುತ್ತಿರುವ ಬಗ್ಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಅಮೆರಿಕದ ನಿಲುವನ್ನು ಭಾರತ ಪರೋಕ್ಷವಾಗಿ ಬೆಂಬಲಿಸಿದೆ.

ಚೀನಾ ಕುರಿತ ಅಮೆರಿಕ ವಿದೇಶಾಂಗ ಸಚಿವ ಮೈಕ್ ಪಾಂಪಿಯೊ ಹೇಳಿಕೆಗೆ ಭಾರತ ತಕ್ಷಣ ಪ್ರತಿಕ್ರಿಯಿಸಿಲ್ಲ. ಚೀನಾ ಜತೆ ಗಡಿ ಸಂಘರ್ಷಕ್ಕೆ ಸಾಕ್ಷಿಯಾಗಿದ್ದ ಲಡಾಖ್‌ನ ಗಾಲ್ವನ್ ಕಣಿವೆಯಿಂದ ಉಭಯ ದೇಶಗಳನ್ನು ಸೇನೆಗಳನ್ನು ಹಿಂದೆತೆದುಕೊಳ್ಳುವ ಪ್ರಕ್ರಿಯೆ ಜಾರಿಯಲ್ಲಿದೆ. ಈ ಸಂಬಂಧ ನಡೆಯುತ್ತಿರುವ ಮಾತುಕತೆಯು ಮಧ್ಯದಲ್ಲಿ ಹಳಿ ತಪ್ಪಬಾರದು ಎಂಬ ಕಾರಣಕ್ಕೆ ಭಾರತ ತಕ್ಷಣದ ಪ್ರತಿಕ್ರಿಯೆ ನೀಡಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.

ದಕ್ಷಿಣ ಚೀನಾ ಸಮುದ್ರ ವ್ಯಾಪ್ತಿಯಲ್ಲಿ ಶಾಂತಿ ಹಾಗೂ ಸ್ಥಿರತೆ ಸ್ಥಾಪನೆಗೆ ಭಾರತ ಬದ್ಧವಾಗಿದೆ. ಅಲ್ಲಿ ನೌಕಾ ಸಂಚಾರ ನಿರ್ಬಂಧಿಸುವ ಹಾಗೂ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟುಮಾಡುವ ಯತ್ನಗಳನ್ನು ನಿರ್ಬಂಧಿಸುವ ಯಾವುದೇ ಕ್ರಮಗಳನ್ನು ಭಾರತ ಬೆಂಬಲಿಸಲಿದೆ ಎಂದು ಮೂಲಗಳು ತಿಳಿಸಿವೆ. ಬೆದರಿಕೆ ಅಥವಾ ಸೇನಾ ಬಲಪ್ರಯೋಗದ ಬದಲಾಗಿ, ಮಾತುಕತೆ ಮೂಲಕ ವಿವಾದ ಬಗೆಹರಸಿಕೊಳ್ಳುವ ಸಂಬಂಧ ಚೀನಾ ಸೇರಿದಂತೆ ಕಡಲ ನೆರೆಯಹೊರೆಯ ದೇಶಗಳಿಗೆ ಭಾರತ ಸದ್ಯದಲ್ಲೇ ಔಪಚಾರಿಕವಾಗಿ ಕರೆ ನೀಡಲಿದೆ.

ADVERTISEMENT

ಪ್ರತಿ ವರ್ಷ ದಕ್ಷಿಣ ಚೀನಾ ಸಮುದ್ರ ಮಾರ್ಗದಲ್ಲಿ ₹350 ಲಕ್ಷ ಕೋಟಿ ಮೌಲ್ಯದ ಅಂತರರಾಷ್ಟ್ರೀಯ ವಹಿವಾಟು ನಡೆಯುತ್ತದೆ. ಭಾರತದ ಶೇ 55ರಷ್ಟು ವ್ಯಾಪಾರ ಇದೇ ಮಾರ್ಗವನ್ನು ಅವಲಂಬಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.