ADVERTISEMENT

US tariffs: ಅಮೆರಿಕದಲ್ಲಿ 'ಮೇಡ್ ಇನ್‌ ಇಂಡಿಯಾ' ಉತ್ಪನ್ನಗಳು ಇನ್ನು ದುಬಾರಿ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2025, 4:45 IST
Last Updated 27 ಆಗಸ್ಟ್ 2025, 4:45 IST
<div class="paragraphs"><p>ಅಮೆರಿಕ-ಭಾರತ </p></div>

ಅಮೆರಿಕ-ಭಾರತ

   

(ಐಸ್ಟೋಕ್ ಸಾಂದರ್ಭಿಕ ಚಿತ್ರ)

ನವದೆಹಲಿ: ಭಾರತದಿಂದ ಆಮದಾಗುವ ಸರಕುಗಳ ಮೇಲೆ ಆಗಸ್ಟ್ 27ರ ಮಧ್ಯರಾತ್ರಿ (ಭಾರತೀಯ ಕಾಲಮಾನ ಆಗಸ್ಟ್‌ 28ರ ಬೆಳಿಗ್ಗೆ 9.31) ಜಾರಿಗೆ ಬರುವಂತೆ ಶೇ 25 ರಷ್ಟು ಹೆಚ್ಚುವರಿ ಸುಂಕ ವಿಧಿಸಿ ಅಮೆರಿಕ ಅಧಿಸೂಚನೆ ಹೊರಡಿಸಿದೆ. ಇದರೊಂದಿಗೆ, ಒಟ್ಟಾರೆ ಸುಂಕದ ಪ್ರಮಾಣ ಇದೀಗ ಶೇ 50ಕ್ಕೆ ಏರಿಕೆಯಾಗಿದೆ.

ADVERTISEMENT

ಈ ಕ್ರಮದಿಂದಾಗಿ ಬಹುತೇಕ 'ಮೇಡ್‌ ಇನ್‌ ಇಂಡಿಯಾ' ಉತ್ಪನ್ನಗಳ ಬೆಲೆ ದುಬಾರಿಯಾಗುವುದರಿಂದ, ಅಮೆರಿಕದ ಮಾರುಕಟ್ಟೆಯಲ್ಲಿ ಹಿನ್ನಡೆ ಅನುಭವಿಸುವ ಸಾಧ್ಯತೆ ಇದೆ.

ಅಮೆರಿಕ ತಲುಪುವ ಭಾರತದ ಸರಕುಗಳಿಗೆ ಹೊಸ ಸುಂಕ ವ್ಯವಸ್ಥೆಯು ಆಗಸ್ಟ್ 27ರ ಮಧ್ಯರಾತ್ರಿಯಿಂದ ಅನ್ವಯವಾಗಲಿದೆ ಎಂದು ಅಮೆರಿಕದ ಹೋಮ್‌ಲ್ಯಾಂಡ್‌ ಸೆಕ್ಯುರಿಟಿ ಇಲಾಖೆಯು (ಕಸ್ಟಮ್ಸ್‌ ವಿಭಾಗ) ಸೋಮವಾರ ಹೊರಡಿಸಿದ ಆದೇಶದಲ್ಲಿ ತಿಳಿಸಿದೆ.

ಪರಿಣಾಮವೇನು?

ಪ್ರತಿ ಸುಂಕವಾಗಿ ಶೇ 25 ರಷ್ಟು ಆಗಸ್ಟ್‌ 1ರಿಂದಲೇ ಜಾರಿಗೆಯಾಗಿದೆ. ಆದಾಗ್ಯೂ, ಹೆಚ್ಚುವರಿಯಾಗಿ ಶೇ 25 ರಷ್ಟು ಸುಂಕವನ್ನು ಮತ್ತೆ ಹೇರಲಾಗಿದೆ. ಪ್ರತಿಸ್ಪರ್ಧಿ ರಾಷ್ಟ್ರಗಳಾದ ವಿಯೆಟ್ನಾಂ, ಬಾಂಗ್ಲಾದೇಶ, ಇಂಡೊನೇಷ್ಯಾ, ಜಪಾನ್‌ ಮತ್ತು ಚೀನಾ ರಾಷ್ಟ್ರಗಳಿಗೆ ಅಮೆರಿಕ ಕಡಿಮೆ ಸುಂಕ ವಿಧಿಸುತ್ತಿರುವುದರಿಂದ, ಭಾರತದ ಸ್ಪರ್ಧೆಗೆ ತೊಡಕಾಗಲಿದೆ. ಅದಲ್ಲದೆ, ಈ ಕ್ರಮವು ಭಾರತ ಮತ್ತು ಅಮೆರಿಕದ ನಡುವಣ ಸಂಬಂಧವನ್ನು ಹದಗೆಡಿಸಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ರೈತರು, ಸಣ್ಣ ಉದ್ಯಮಿಗಳು ಮತ್ತು ಜಾನುವಾರು ಸಾಕಣೆದಾರರ ಹಿತಾಸಕ್ತಿಯ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಪ್ರತಿಪಾದಿಸಿದ್ದ ಕೆಲವೇ ಗಂಟೆಗಳಲ್ಲಿ ಅಮೆರಿಕದ ಹೋಮ್‌ಲ್ಯಾಂಡ್‌ ಸೆಕ್ಯುರಿಟಿ ಇಲಾಖೆಯು ಹೆಚ್ಚುವರಿ ಸುಂಕಕ್ಕೆ ಸಂಬಂಧಿಸಿದ ಆದೇಶ ನೀಡಿದೆ.

ಭಾರತದ ಆರ್ಥಿಕತೆಯು ಹೆಚ್ಚಾಗಿ ದೇಶೀಯ ಮಾರುಕಟ್ಟೆಯನ್ನು ಆಧರಿಸಿದ್ದರೂ, ದೇಶದ ಜಿಡಿಪಿ ಮೇಲೆ ಶೇ 0.2ರಿಂದ ಶೇ 1ರಷ್ಟು ಪರಿಣಾಮ ಉಂಟಾಗುವ ಸಾಧ್ಯತೆ ಇದೆ ಎಂದು ಹಲವು ವಿಶ್ಲೇಷಣೆಗಳು ಹೇಳಿವೆ.

ಯಾವೆಲ್ಲ ಉದ್ಯಮಗಳಿಗೆ ಹಿನ್ನಡೆ

ಅಮೆರಿಕದ ಕ್ರೆಡಿಟ್‌ ರೇಟಿಂಗ್‌ ಏಜೆನ್ಸಿ 'Fitch', 'ಸುಂಕದ ಕುರಿತಾದ ಅನಿಶ್ಚಿತತೆಯು ವ್ಯವಹಾರ ಮತ್ತು ಹೂಡಿಕೆ ಮೇಲೆ ಪರಿಣಾಮ ಬೀರಲಿದೆ. ಇದರಿಂದಾಗಿ, ಲಕ್ಷಾಂತರ ಜನರು ಉದ್ಯೋಗ ಕಳೆದುಕೊಳ್ಳುವ ಸಾಧ್ಯತೆಯಿದೆ. ಮುಖ್ಯವಾಗಿ, ಜವಳಿ, ಚರ್ಮ, ಆಭರಣ ಉದ್ಯಮಗಳಿಗೆ ಪೆಟ್ಟು ಬೀಳಬಹುದು' ಎಂದು ಅಂದಾಜಿಸಿದೆ.

'ಪಿಂಗಾಣಿ, ರಾಸಾಯನಿಕಗಳು, ಕರಕುಶಲ ವಸ್ತುಗಳಿಗೆ ಸಂಬಂಧಿಸಿದ ಉದ್ಯಮಗಳು ಯುರೋಪ್‌, ಆಗ್ನೇಯ ಏಷ್ಯಾ ದೇಶಗಳು ಮತ್ತು ಮೆಕ್ಸಿಕೊದಂತಹ ಪ್ರತಿಸ್ಪರ್ಧಿ ರಾಷ್ಟ್ರಗಳ ಕೈಗಾರಿಕೆಗಳಿಂದ ತೀವ್ರ ಪೈಪೋಟಿ ಎದುರಿಸಬೇಕಾಗುತ್ತದೆ' ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.