ADVERTISEMENT

ವಿಮಾನ ನಿಲ್ದಾಣ: ಭದ್ರತಾ ತಪಾಸಣೆಗೆ 3ಡಿ ಸ್ಕ್ಯಾನರ್ - ಬಿಸಿಎಎಸ್‌ ಶಿಫಾರಸು

ಪ್ರಜಾವಾಣಿ ವಿಶೇಷ
Published 21 ಡಿಸೆಂಬರ್ 2022, 22:30 IST
Last Updated 21 ಡಿಸೆಂಬರ್ 2022, 22:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ:ಪ್ರಯಾಣಿಕರುವಿಮಾನ ನಿಲ್ದಾಣಗಳ ಸ್ಕ್ಯಾನರ್‌ಗಳಲ್ಲಿ (ಶೋಧಕ) ಭದ್ರತಾ ತಪಾಸಣೆಗೆ ಒಳಗಾಗುವ ಮುನ್ನ, ತಮ್ಮ ಚೀಲದಲ್ಲಿರುವ ಮೊಬೈಲ್‌, ಚಾರ್ಜರ್‌ನಂತಹ ವಿದ್ಯುನ್ಮಾನ ಉಪಕರಣಗಳನ್ನು ತೆಗೆದಿರಿಸುವ ಪ್ರಮೇಯ ಇನ್ನುಮುಂದೆ ಇರುವುದಿಲ್ಲ. ನಿಲ್ದಾಣಗಳಲ್ಲಿ ಪ್ರಯಾಣಿಕರ ಭದ್ರತಾ ತಪಾಸಣೆಗೆ ಕಂಪ್ಯೂಟರ್ ಟೊಮೊಗ್ರಫಿ ತಂತ್ರಜ್ಞಾನ ಆಧರಿತ 3ಡಿ ಸ್ಕ್ಯಾನರ್‌ಗಳನ್ನು ಅಳವಡಿಸುವಂತೆ ನಾಗರಿಕ ವಿಮಾನಯಾನ ಭದ್ರತಾ ಸಂಸ್ಥೆ (ಬಿಸಿಎಎಸ್) ಶಿಫಾರಸು ಮಾಡಿದೆ.

ಕೈಚೀಲದಲ್ಲಿರುವ (ಹ್ಯಾಂಡ್ ಬ್ಯಾಗೇಜ್) ವಸ್ತುಗಳನ್ನು ಎರಡು ಆಯಾಮಗಳಲ್ಲಿ ಮಾತ್ರ ನೋಡಬಹುದಾದ ಸ್ಕ್ಯಾನರ್‌ಗಳನ್ನು ವಿಮಾನ ನಿಲ್ದಾಣಗಳಲ್ಲಿ ಈಗ ಬಳಸಲಾಗುತ್ತಿದೆ. ಆದರೆಕಂಪ್ಯೂಟರ್ ಟೊಮೊಗ್ರಫಿ ತಂತ್ರಜ್ಞಾನ ಆಧರಿತ ಸ್ಕ್ಯಾನರ್‌ಗಳು ಕೈಚೀಲಗಳ ಮೂರು ಆಯಾಮಗಳ (3ಡಿ) ಚಿತ್ರಣವನ್ನು ಒದಗಿಸಲಿವೆ ಎಂದು ಸಂಸ್ಥೆಯ ಜಂಟಿ ಮಹಾನಿರ್ದೇಶಕ ಜೈದೀಪ್‌ ಪ್ರಸಾದ್ ಬುಧವಾರ ಹೇಳಿದ್ದಾರೆ.

ಸುಧಾರಿತ ಹೊಸ ಸ್ಕ್ಯಾನರ್‌ಗಳ ಮೂಲಕ ಹಾದುಹೋಗುವಾಗ, ಪ್ರಯಾಣಿಕರು ತಮ್ಮ ಕೈಚೀಲಗಳಿಂದ ವಿದ್ಯುನ್ಮಾನ ಉಪಕರಣಗಳನ್ನು ತೆಗೆದಿರಿಸಬೇಕಾಗುವುದಿಲ್ಲ ಎಂದು ಅವರು ಹೇಳಿದ್ದಾರೆ. ಈ ಸ್ಕ್ಯಾನರ್‌ಗಳನ್ನು ಅಳವಡಿಸುವುದರಿಂದ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರ ಭದ್ರತಾ ತಪಾಸಣಾ ಪ್ರಕ್ರಿಯೆಯೂ ವೇಗವಾಗಿ ಮುಗಿಯುತ್ತದೆ.

ADVERTISEMENT

ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ದೇಶದ ಹಲವು ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಳ ಹಾಗೂ ಭದ್ರತಾ ತಪಾಸಣೆಗೆ ಸರದಿಯಲ್ಲಿ ಹೆಚ್ಚು ಸಮಯ ಕಾಯುವ ಸ್ಥಿತಿ ಎದುರಾಗಿದೆ ಎಂಬ ಬಗ್ಗೆಕಳೆದ ಕೆಲವು ವಾರಗಳಿಂದ ದೂರುಗಳು ಬರುತ್ತಿವೆ. ದಟ್ಟಣೆ ಹಾಗೂ ಪ್ರಯಾಣಿಕರ ಸರತಿ ಸಾಲು ತಗ್ಗಿಸಲು ಭದ್ರತಾ ಅಧಿಕಾರಿಗಳು ಹಲವು ಕ್ರಮಗಳನ್ನು ತೆಗೆದುಕೊಂಡಿದ್ದರು.

ಅತಿಸೂಕ್ಷ್ಮ ಮತ್ತು ಸೂಕ್ಷ್ಮ ಭದ್ರತೆಯ ವಿಮಾನ ನಿಲ್ದಾಣಗಳಲ್ಲಿ ಕಂಪ್ಯೂಟರ್ ಟೊಮೊಗ್ರಫಿ ಎಕ್ಸ್‌ಪ್ಲೋಸಿವ್ ಡಿಟೆಕ್ಟಿವ್ ಸೈಸ್ಟಮ್ಸ್ (ಸಿಟಿ–ಇಡಿಎಸ್) ಮಷಿನ್ ಮತ್ತು ಡುಯಲ್ ಜನರೇಟರ್ ಎಕ್ಸ್–ಬಿಐಎಸ್‌ ಮಷಿನ್‌ಗಳ ಅಳವಡಿಕೆ ಹಾಗೂಆಧುನಿಕ ತಂತ್ರಜ್ಞಾನ ಬಳಕೆಗೆ ಶಿಫಾರಸು ಮಾಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಬರಲಿದೆ ಇಡೀ ದೇಹದ ಸ್ಕ್ಯಾನ್‌ ವ್ಯವಸ್ಥೆ

ಇಡೀ ದೇಹವನ್ನು ಸ್ಕ್ಯಾನಿಂಗ್‌ಗೆ ಒಳಪಡಿಸುವ ವ್ಯವಸ್ಥೆಯನ್ನು ಎಲ್ಲ ವಿಮಾನ ನಿಲ್ದಾಣಗಳಲ್ಲಿ ಜಾರಿಗೊಳಿಸುವ ಉದ್ದೇಶವೂ ಇದೆ. ಅತಿಸೂಕ್ಷ್ಮ ಹಾಗೂ ಸೂಕ್ಷ್ಮ ಎಂದು ಪರಿಗಣಿಸಲಾಗಿರುವ ವಿಮಾನ ನಿಲ್ದಾಣಗಳಲ್ಲಿ ಇದು ಹಂತ ಹಂತವಾಗಿ ಜಾರಿಗೆ ಬರಲಿದೆ. ರೇಡಿಯೊಲಾಜಿಕಲ್ ಡಿಟೆಕ್ಷನ್ ಇಕ್ವಿಪ್‌ಮೆಂಟ್ (ಆರ್‌ಡಿಇ) ಅನ್ನೂ ವಿಮಾನ ನಿಲ್ದಾಣಗಳಲ್ಲಿ ಆದ್ಯತೆಗೆ ಮೇರೆಗೆ ನಿಯೋಜಿಸಲಾಗುವುದು ಎಂದು ನಾಗರಿಕ ವಿಮಾನಯಾನ ಸಚಿವಾಲಯದ ರಾಜ್ಯ ಸಚಿವ ವಿ.ಕೆ. ಸಿಂಗ್ ಅವರು ಲೋಕಸಭೆಗೆ ತಿಳಿಸಿದ್ದರು.

ಬೆಂಗಳೂರು, ದೆಹಲಿ, ಹೈದರಾಬಾದ್‌ ವಿಮಾನ ನಿಲ್ದಾಣಗಳಲ್ಲಿ ಅತಿಕ್ರಮಣ ಪತ್ತೆ ವ್ಯವಸ್ಥೆ (ಪೆರಿಮೀಟರ್ ಇನ್‌ಟ್ರುಷನ್ ಡಿಟೆಕ್ಷನ್ ಸಿಸ್ಟಮ್‌–ಪಿಐಡಿಎಸ್) ತರಲು ಉದ್ದೇಶಿಸಲಾಗಿದೆ. ಈ ವ್ಯವಸ್ಥೆಯಲ್ಲಿರಬೇಕಾದ ಕನಿಷ್ಠ ಸವಲತ್ತುಗಳ ಕುರಿತು ಮಾರ್ಗಸೂಚಿ ಹೊರಡಿಸಲಾಗಿದೆ.

ದೇಶದಲ್ಲಿ ಅಂತರರಾಷ್ಟ್ರೀಯ ಹಾಗೂ ದೇಶೀಯ ವೈಮಾನಿಕ ಸಂಚಾರ ತ್ವರಿತವಾಗಿ ಬೆಳವಣಿಗೆ ಕಾಣುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.