ADVERTISEMENT

ರೈತರ ಪ್ರತಿಭಟನೆಯನ್ನು ಅರಾಜಕತೆ ಎಂದಿರುವ ಯೋಗಿ ಕ್ಷಮೆಯಾಚಿಸಬೇಕು: ಎಸ್‌ಕೆಎಂ

ಪಿಟಿಐ
Published 6 ಡಿಸೆಂಬರ್ 2024, 4:18 IST
Last Updated 6 ಡಿಸೆಂಬರ್ 2024, 4:18 IST
<div class="paragraphs"><p>ಯೋಗಿ ಆದಿತ್ಯನಾಥ</p></div>

ಯೋಗಿ ಆದಿತ್ಯನಾಥ

   

– ಪಿಟಿಐ ಚಿತ್ರ

ನವದೆಹಲಿ: ರೈತರ ಹೋರಾಟವನ್ನು ಅರಾಜಕತೆ ಎಂದು ಕರೆದಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕ್ಷಮೆಯಾಚಿಸಬೇಕು ಮತ್ತು ನ್ಯಾಯಾಂಗ ಹಾಗೂ ರಾಜಕೀಯ ಪಕ್ಷಗಳು ಮಧ್ಯಪ್ರವೇಶಿಸಬೇಕು ಎಂದು ಸಂಯುಕ್ತ ಕಿಸಾನ್ ಮೋರ್ಚಾ(ಎಸ್‌ಕೆಎಂ) ಒತ್ತಾಯಿಸಿದೆ.

ADVERTISEMENT

‘ರೈತರ ಹೋರಾಟವನ್ನು ಅರಾಜಕತೆ ಎಂದು ಕರೆದಿದ್ದಕ್ಕಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕ್ಷಮೆಯಾಚಿಸಬೇಕೆಂದು ಎಸ್‌ಕೆಎಂ ಒತ್ತಾಯಿಸುತ್ತದೆ. ಪ್ರತಿಭಟನೆ ಮಾಡುವುದು ಪ್ರತಿಯೊಬ್ಬ ನಾಗರಿಕನ ಸಾಂವಿಧಾನಿಕ ಹಕ್ಕು. ಬ್ರಿಟಿಷ್ ವಸಾಹತುಶಾಹಿ ಮತ್ತು ಊಳಿಗಮಾನ್ಯ ಪದ್ಧತಿಯ ವಿರುದ್ಧದ ಹೋರಾಟದ ಬಳಿಕ ಸ್ವಾತಂತ್ರ್ಯ ಪಡೆದು ಎಲ್ಲರಿಗೂ ಅನ್ವಯವಾಗುವಂತೆ ಸಂವಿಧಾನ ರಚಿಸಲಾಗಿದೆ’ ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ.

ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಸಾಂವಿಧಾನಿಕ ಸ್ಥಾನವನ್ನು ಅಲಂಕರಿಸಿರುವ ವ್ಯಕ್ತಿ ರೈತರ ಪ್ರತಿಭಟನೆಯನ್ನು ಅರಾಜಕತೆ ಎಂದು ಅವಮಾನಿನಿಸಿರುವುದು ಅನಿರೀಕ್ಷಿತವಾಗಿದೆ. ಯೋಗಿ ಆದಿತ್ಯನಾಥ್ ಅವರು ಕೂಡಲೇ ಹೇಳಿಕೆಯನ್ನು ಹಿಂಪಡೆದು ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದೆ.

ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಅಥವಾ ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (ಬಿಎನ್‌ಎಸ್‌ಎಸ್)ಯಲ್ಲಿ ಪ್ರತಿಭಟನೆ ನಿಗ್ರಹಿಸುವ ಕುರಿತಂತೆ ಯಾವುದೇ ಷರತ್ತುಗಳಿಲ್ಲದಿದ್ದರೂ ಉತ್ತರ ಪ್ರದೇಶ ಪೊಲೀಸರು ರೈತ ಮುಖಂಡರ ಮನೆಗಳಿಗೆ ಅಕ್ರಮವಾಗಿ ಪ್ರವೇಶಿಸಿ, ಗೃಹಬಂಧನದ ನೆಪದಲ್ಲಿ ಅವರನ್ನು ಬಂಧಿಸುತ್ತಿದ್ದಾರೆ ಎಂದು ಎಸ್‌ಕೆಎಂ ಆರೋಪಿಸಿದೆ.

ಲಖಿಂಪುರ ಖೇರಿ ಹತ್ಯಾಕಾಂಡದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಎಸ್‌ಕೆಎಂ ನಾಯಕ ತಜಿಂದರ್ ಸಿಂಗ್ ವಿರ್ಕ್ ಅವರನ್ನು ಕಟ್ಘರ್ ಪೊಲೀಸ್ ಠಾಣೆಯಲ್ಲಿ ಮೂರು ಗಂಟೆಗಳಿಗೂ ಹೆಚ್ಚು ಕಾಲ ಬಂಧಿಸಲಾಗಿತ್ತು. ಡಿಸೆಂಬರ್ 4ರಂದು ಕಿಸಾನ್ ಮಹಾಪಂಚಾಯತ್‌ಗೆ ಹಾಜರಾಗದಂತೆ ತಡೆಯಲು ರಾಕೇಶ್ ಟಿಕಾಯತ್ ಅವರನ್ನು ಯಮುನಾ ಎಕ್ಸ್‌ಪ್ರೆಸ್‌ವೇನಲ್ಲಿ ಅಲಿಗಢ ಪೊಲೀಸರು ಬಂಧಿಸಿದ್ದಾರೆ ಎಂದು ಅದು ತಿಳಿಸಿದೆ.

ರೈತರು ಕ್ರಿಮಿನಲ್‌ಗಳಲ್ಲ. ತೀವ್ರವಾದಿಗಳೂ ಅಲ್ಲ. ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ನ್ಯಾಯಕ್ಕಾಗಿ ನ್ಯಾಯಯುತ ಹೋರಾಟ ನಡೆಸುವುದನ್ನು ಹತ್ತಿಕ್ಕುವುದು ಕಾನೂನುಬಾಹಿರ ಎಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.