ADVERTISEMENT

ಲಖಿಂಪುರದಲ್ಲಿ ಪೊಲೀಸ್ ಬಂದೋಬಸ್ತ್‌ನಲ್ಲಿ ಮತದಾನ ಮಾಡಿದ ಅಜಯ್ ಮಿಶ್ರಾ

ಪಿಟಿಐ
Published 23 ಫೆಬ್ರುವರಿ 2022, 9:30 IST
Last Updated 23 ಫೆಬ್ರುವರಿ 2022, 9:30 IST
ಅಜಯ್ ಮಿಶ್ರಾ (ಸಂಗ್ರಹ ಚಿತ್ರ)
ಅಜಯ್ ಮಿಶ್ರಾ (ಸಂಗ್ರಹ ಚಿತ್ರ)   

ಲಖನೌ: ಉತ್ತರ ಪ್ರದೇಶದಲ್ಲಿ ನಾಲ್ಕನೇ ಹಂತದ ಮತದಾನ ಬುಧವಾರ ನಡೆಯುತ್ತಿದ್ದು, ರೈತರ ಹತ್ಯೆಯ ಆರೋಪ ಹೊತ್ತಿರುವ ಅಶಿಶ್ ಮಿಶ್ರಾ ಅವರ ತಂದೆ, ಕೇಂದ್ರ ಸಚಿವ ಅಜಯ್ ಮಿಶ್ರಾ ಲಖಿಂಪುರದ ಮತಗಟ್ಟೆಯಲ್ಲಿ ನೂರಾರು ಪೊಲೀಸರು ಹಾಗೂ ಅರೆಸೈನಿಕ ಪಡೆಯ ಬಿಗು ಬಂದೋಬಸ್ತ್‌ನಲ್ಲಿ ಮತದಾನದ ಹಕ್ಕನ್ನು ಚಲಾಯಿಸಿದರು.

ಕಳೆದ ವರ್ಷ ಅಕ್ಟೋಬರ್ 3ರಂದು ಲಖಿಂಪುರ ಖೇರಿಯಲ್ಲಿ ಕೇಂದ್ರ ಕೃಷಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಆಶಿಶ್ ಮಿಶ್ರಾ ಹಾಗೂ ಅವರ ಬೆಂಗಾವಲು ಪಡೆಯ ವಾಹನಗಳು ಚಲಿಸಿದ್ದವು. ಈ ಹಿಂಸಾಚಾರದಲ್ಲಿ ನಾಲ್ವರು ರೈತರು ಸೇರಿದಂತೆ ಎಂಟು ಮಂದಿ ಮೃತಪಟ್ಟಿದ್ದರು.

ಇತ್ತೀಚೆಗಷ್ಟೇ ಲಖಿಂಪುರ ಖೇರಿ ಹಿಂಸಾಚಾರದ ಆರೋಪಿಯಾಗಿರುವ ಆಶಿಶ್ ಮಿಶ್ರಾ ಅವರಿಗೆ ಅಲಹಾಬಾದ್ ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು.

ADVERTISEMENT

ಪೊಲೀಸ್ ಬಂದೋಬಸ್ತ್ ನಡುವೆ ಮತದಾನ ಮಾಡಲು ಆಗಮಿಸಿದ ಅಜಯ್ ಮಿಶ್ರಾ, ವಿಜಯ ಸಂಕೇತವನ್ನು ತೋರಿಸುತ್ತಾ ಸಾಗಿದರು.

ಉತ್ತರ ಪ್ರದೇಶದಲ್ಲಿ ನಾಲ್ಕನೇ ಹಂತದಲ್ಲಿ 59 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಲಖಿಂಪುರದಲ್ಲಿ ಕೇಂದ್ರ ಸಚಿವ ಅಜಯ್ ಮಿಶ್ರಾ ಪ್ರಭಾವ ಎಷ್ಟಿದೆ ಎಂಬುದನ್ನು ಈ ಹಂತವು ಸ್ಪಷ್ಟಪಡಿಸಲಿದೆ.


ಆಶಿಶ್ ಮಿಶ್ರಾ ಜಾಮೀನಿನಲ್ಲಿ ಹೊರಗೆ ಬಂದಿರುವುದು ಹಾಗೂ ಅಜಯ್ ಮಿಶ್ರಾ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡದಿರುವುದು ರೈತರಲ್ಲಿ ಬಾರಿ ಆಕ್ರೋಶಕ್ಕೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.