ADVERTISEMENT

ಲೈಂಗಿಕ ದೌರ್ಜನ್ಯ: ಬಿಜೆಪಿ ಮಾಜಿ ಪದಾಧಿಕಾರಿ ವಿರುದ್ಧ ಮತ್ತೊಂದು ಎಫ್‌ಐಆರ್‌

ಡಿವಿಡಿ, ಹಾರ್ಡ್‌ ಡಿಸ್ಕ್‌ ವಶಪಡಿಸಿಕೊಂಡ ಪೊಲೀಸರು

ಪಿಟಿಐ
Published 16 ಜನವರಿ 2021, 13:00 IST
Last Updated 16 ಜನವರಿ 2021, 13:00 IST
.
.   

ಜಲೌನ್‌ (ಉತ್ತರ ಪ್ರದೇಶ): ಬಾಲಕನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿಯ ಮಾಜಿ ಪದಾಧಿಕಾರಿ ರಾಮ್‌ ಬಿಹಾರಿ ರಾಠೋಡ್‌ ವಿರುದ್ಧ ಪೊಲೀಸರು ಮತ್ತೊಂದು ಎಫ್‌ಐಆರ್‌ ದಾಖಲಿಸಿದ್ದಾರೆ.

ರಾಠೋಡ್‌ ವಿರುದ್ಧ ದಾಖಲಾಗಿರುವ ಮೂರನೇ ಪ್ರಕರಣ ಇದಾಗಿದೆ. 2014ರಿಂದಲೂ ರಾಮ್‌ ಬಿಹಾರಿ ಲೈಂಗಿಕ ದೌರ್ಜನ್ಯವೆಸಗಿದ್ದಾನೆ ಎಂದು ಬಾಲಕನೊಬ್ಬ ದೂರು ನೀಡಿದ್ದ.

ಇಬ್ಬರು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪಕ್ಕಾಗಿ ಬುಧವಾರ ರಾಠೋಡ್‌ನನ್ನು ಬಂಧಿಸಲಾಗಿತ್ತು.

ADVERTISEMENT

ತಮ್ಮ ಮೇಲೆಯೂ ರಾಠೋಡ್‌ ಲೈಂಗಿಕ ದೌರ್ಜನ್ಯವೆಸಗಿದ್ದಾನೆ ಎಂದು ಇನ್ನೂ ಕೆಲವು ಬಾಲಕರು ಮುಂದೆ ಬಂದಿದ್ದಾರೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯೆಶ್ವೀರ್‌ ಸಿಂಗ್‌ ತಿಳಿಸಿದ್ದಾರೆ.

ಈಗಾಗಲೇ ಪೊಲೀಸರು ಡಿವಿಡಿ ಮತ್ತು ಹಾರ್ಡ್‌ ಡಿಸ್ಕ್‌ ಸೇರಿದಂತೆ ರಾಠೋಡ್‌ನ ಲ್ಯಾಪ್‌ಟಾಪ್‌ನಲ್ಲಿದ್ದ 15ರಿಂದ 20 ವಿಡಿಯೊಗಳನ್ನು ವಶಪಡಿಸಿಕೊಂಡಿದ್ದಾರೆ. ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವೆಸಗುತ್ತಿರುವ ದೃಶ್ಯಗಳು ಇದರಲ್ಲಿವೆ. ಈ ವಿಡಿಯೊಗಳ ಆಧಾರದ ಮೇಲೆ ಏಳು ಬಾಲಕರು ಮತ್ತು ಇಬ್ಬರು ಮಹಿಳೆಯರನ್ನು ಗುರುತಿಸಲಾಗಿದೆ. ಠಾಠೋಡ್‌ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ) ಅಡಿಯಲ್ಲಿಯೂ ಪ್ರಕರಣ ದಾಖಲಿಸಿಕೊಳ್ಳಲಾಗುವುದು. ಈ ಬಗ್ಗೆ ರಾಜ್ಯ ಸರ್ಕಾರದಿಂದಲೂ ನಿರ್ದೇಶನ ಬಂದಿದೆ ಎಂದು ಸಿಂಗ್‌ ತಿಳಿಸಿದ್ದಾರೆ.

ಇಬ್ಬರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವುದನ್ನು ರಾಠೋಡ್‌ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ ಎಂದು ಕೊಂಚ್‌ ಪೊಲೀಸ್‌ ಠಾಣೆಯ ಅಧಿಕಾರಿ ಇಮ್ರಾನ್‌ ಖಾನ್‌ ತಿಳಿಸಿದ್ದಾರೆ.

ದೌರ್ಜನ್ಯದ ಕುರಿತು ಮಹಿಳೆಯರು ಪೊಲೀಸರಿಗೆ ವಿವರಿಸಿದ್ದಾರೆ. ಆದರೆ, ವೈವಾಹಿಕ ಜೀವನದ ಕಾರಣವನ್ನು ಪ್ರಸ್ತಾಪಿಸಿರುವ ಮಹಿಳೆಯರು, ಹೇಳಿಕೆಯನ್ನು ದಾಖಲಿಸಲು ನಿರಾಕರಿಸಿದ್ದಾರೆ. ಮಕ್ಕಳಿಗೆ ಹಣದ ಆಮಿಷವೊಡ್ಡುತ್ತಿದ್ದ ರಾಠೋಡ್‌, ಅಶ್ಲೀಲ ದೃಶ್ಯಗಳನ್ನು ಚಿತ್ರೀಕರಿಸುತ್ತಿದ್ದ. ಬಳಿಕ, ಇವುಗಳನ್ನು ಬಳಸಿಕೊಂಡು ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದ ಎಂದು ಖಾನ್‌ ತಿಳಿಸಿದ್ದಾರೆ.

ರಾಠೋಡ್‌, ಬಿಜೆಪಿಯ ಕೊಂಚ್‌ ಘಟಕದ ಮಾಜಿ ಉಪಾಧ್ಯಕ್ಷನಾಗಿದ್ದ. ಈತನ ಬಂಧನ ಬಳಿಕ, ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟಿಸಲಾಗಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಮೇಂದ್ರ ಸಿಂಗ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.