ADVERTISEMENT

ಉತ್ತರ ‍ಪ್ರದೇಶದಲ್ಲಿ ಹೊಸ ನಿಯಮ: ಹೆಲ್ಮೆಟ್ ಇಲ್ಲದಿದ್ದರೆ ಪೆಟ್ರೋಲ್ ಇಲ್ಲ

ಪಿಟಿಐ
Published 12 ಜನವರಿ 2025, 12:17 IST
Last Updated 12 ಜನವರಿ 2025, 12:17 IST
ಹೆಲ್ಮೆಟ್‌
ಹೆಲ್ಮೆಟ್‌    

ಲಖನೌ: ರಸ್ತೆ ಅಪಘಾತ ಕಡಿಮೆ ಮಾಡುವ ಸಲುವಾಗಿ ಹಾಗೂ ದ್ವಿಚಕ್ರ ವಾಹನಗಳು ಅಪಘಾತ ಸಂಭವಿಸಿದಾಗ ಸಂಭವಿಸುವ ಸಾವು ನೋವಿನ ಪ್ರಮಾಣ ಕಡಿಮೆ ಮಾಡಲು ಉತ್ತರ ಪ್ರದೇಶ ಸಾರಿಗೆ ಇಲಾಖೆ ವಿನೂತನ ಉಪಕ್ರಮ ಜಾರಿಗೆ ತಂದಿದೆ. ‘ಹೆಲ್ಮೆಟ್ ಇಲ್ಲದಿದ್ದರೆ–ಇಂಧನ ಇಲ್ಲ’ ಎನ್ನುವ ಯೋಜನೆ ರಾಜ್ಯದ ನಗರಗಳಲ್ಲಿ ಜಾರಿಗೆ ತಂದಿದೆ.

ಬೈಕ್ ಸವಾರ ಅಥವಾ ಹಿಂಬದಿ ಸವಾರ ಹೆಲ್ಮೆಟ್ ಧರಿಸದೇ ಇದ್ದರೆ ಅಂಥವರಿಗೆ ಇಂಧನ ಮಾರಾಟ ಮಾಡಕೂಡದು ಎಂದು ಎಲ್ಲಾ ಪೆಟ್ರೋಲ್ ಬಂಕ್‌ಗಳಿಗೆ ನಿರ್ದೇಶನ ನೀಡಿ ಜನವರಿ 8ರಂದು ರಾಜ್ಯದ ಸಾರಿಗೆ ಆಯುಕ್ತ ಬ್ರಜೇಶ್ ನರೈನ್ ಸಿಂಗ್ ಪತ್ರ ಬರೆದಿದ್ದಾರೆ.

ಈ ಪತ್ರವನ್ನು ಎಲ್ಲಾ 75 ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಕಳುಹಿಸಿಕೊಡಲಾಗಿದ್ದು, ಈ ಬಗ್ಗೆ ತುರ್ತು ಗಮನಹರಿಸಬೇಕು ಎಂದು ಸೂಚಿಸಲಾಗಿದೆ. ಹೆಲ್ಮೆಟ್ ಧರಿಸದೇ ಇರುವುದರಿಂದ ಸಾವುನೋವಿನ ಸಂಖ್ಯೆಯ ದತ್ತಾಂಶವನ್ನೂ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ADVERTISEMENT

‘ದ್ವಿಚಕ್ರ ವಾಹನ ಸವಾರರನ್ನು ಒಳಗೊಂಡ ರಸ್ತೆ ಅಪಘಾತಗಳಲ್ಲಿ ಹೆಚ್ಚಿನ ಸಾವುಗಳು ಹೆಲ್ಮೆಟ್ ಬಳಸದ ಕಾರಣದಿಂದ ಸಂಭವಿಸುತ್ತಿವೆ. ಈ ನೀತಿಯು ಜೀವಗಳನ್ನು ಉಳಿಸುವ ಮತ್ತು ರಸ್ತೆ ಸುರಕ್ಷತೆಯನ್ನು ಖಾತ್ರಿಪಡಿಸುವ ಗುರಿಯನ್ನು ಹೊಂದಿದೆ’ ಎಂದು ಪತ್ರದಲ್ಲಿ ಹೇಳಲಾಗಿದೆ.

ಈ ಉಪಕ್ರಮವನ್ನು ಈ ಹಿಂದೆ 2019 ರಲ್ಲಿ ಗೌತಮ್ ಬುದ್ಧ ನಗರ ಜಿಲ್ಲೆಯಲ್ಲಿ ಪರಿಚಯಿಸಲಾಗಿತ್ತು. ಆದರೆ ಸಮರ್ಪಕವಾಗಿ ಜಾರಿಯಾಗಿರಲಿಲ್ಲ. ಆದರೆ ಇದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಪತ್ರದಲ್ಲಿ ಹೇಳಲಾಗಿದೆ.

ಪೆಟ್ರೋಲ್‌ ಬಂಕ್‌ಗಳಲ್ಲಿ ‘No helmet No Fuel’ ಎನ್ನುವ ಬೋರ್ಡ್ ಪ್ರದರ್ಶಿಸಬೇಕು ಎಂದು ಪತ್ರದಲ್ಲಿ ಸೂಚಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.