ADVERTISEMENT

ಉತ್ತರ ಪ್ರದೇಶ: ಆಹಾರ ಸಿಗದೆ ರೈಲು ನಿಲ್ದಾಣಗಳ ಅಂಗಡಿಗಳನ್ನು ದೋಚಿದ ಕಾರ್ಮಿಕರು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಮೇ 2020, 14:22 IST
Last Updated 23 ಮೇ 2020, 14:22 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಲಖನೌ: ಶ್ರಮಿಕ್‌ ರೈಲುಗಳಲ್ಲಿ ತೆರಳುತ್ತಿದ್ದ ವಲಸೆ ಕಾರ್ಮಿಕರು ಆಹಾರ, ನೀರು ಸಿಗದೆ ಉತ್ತರ ಪ್ರದೇಶದ ಹಲವು ರೈಲು ನಿಲ್ದಾಣಗಳಲ್ಲಿ ಆಹಾರ ಪೊಟ್ಟಣಗಳು ಮತ್ತು ಕಚೇರಿಗಳನ್ನು ದೋಚಿರುವುದು ಬೆಳಕಿಗೆ ಬಂದಿದೆ.

ಶುಕ್ರವಾರ ನೂರಕ್ಕೂ ಹೆಚ್ಚು ವಲಸೆ ಕಾರ್ಮಿಕರು ಚಂದೌಲಿ ಜಿಲ್ಲೆಯ ದೀನ್‌ ದಯಾಳ್‌ ಉಪಾಧ್ಯಾಯ ರೈಲು ನಿಲ್ದಾಣದಲ್ಲಿ ರೈಲು ಹಳಿಗಳ ಮೇಲೆ ಕುಳಿತಿದ್ದು, ರೈಲು ಸಂಚಾರಕ್ಕೆ ತಡೆಯೊಡ್ಡಿದ್ದಾರೆ. ಇದರಿಂದ ವಿಶಾಖಪಟ್ಟಣ– ಛಾಪ್ರಾ ಶ್ರಮಿಕ್‌ ರೈಲು ಹತ್ತು ಗಂಟೆಗಳವರೆಗೆ ನಿಲ್ದಾಣದಲ್ಲಿ ನಿಂತಿತ್ತು.

‘48 ಗಂಟೆಗಳಿಂದ ಕಾರ್ಮಿಕರಿಗೆ ಆಹಾರ ಮತ್ತು ನೀರು ಇಲ್ಲದಾಗಿದೆ. ಹೀಗಾಗಿ ಆಕ್ರೋಶಗೊಂಡಿರುವ ಕಾರ್ಮಿಕರು ರೈಲು ಸಂಚಾರವನ್ನು ತಡೆಯಲು ರೈಲಿನ ಸೀಟ್‌ಗಳನ್ನು ಹಳಿಗಳ ಮೇಲೆ ಎಸೆದಿದ್ದಾರೆ’ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ADVERTISEMENT

ಪನ್ವೆಲ್‌– ಜೌನ್‌ಪುರ ಶ್ರಮಿಕ್‌ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವಲಸೆ ಕಾರ್ಮಿಕರು ಕಿಟಕಿ, ಗಾಜುಗಳನ್ನು ಒಡೆದಿದ್ದಾರೆ. ಇದರಿಂದ ವಾರಾಣಸಿ ಸಮೀಪದ ವ್ಯಾಸ್‌ನಗರ ನಿಲ್ದಾಣದಲ್ಲಿ ಹಲವು ಗಂಟೆಗಳ ರೈಲು ನಿಂತಿತ್ತು. ಬೆಂಗಳೂರು – ದರ್ಬಾಂಗ ಶ್ರಮಿಕ್‌ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಕಾರ್ಮಿಕರೂ ಅಜ್ಗೈನ್‌, ಸೋನಿಕ್‌, ಉನ್ನಾವೊ ರೈಲು ನಿಲ್ದಾಣಗಳ ಕಚೇರಿಗಳನ್ನು ದೋಚಿದ್ದಾರೆ. ‘ನಾವು ಎರಡು ದಿನಗಳಿಂದ ಪ್ರಯಾಣಿಸುತ್ತಿದ್ದೇವೆ. ನಮ್ಮೊಂದಿಗೆ ಮಕ್ಕಳಿದ್ದು, ಆಹಾರ ಮತ್ತು ನೀರು ಸೌಲಭ್ಯ ಇಲ್ಲ’ ಎಂದು ಕಾರ್ಮಿಕರೊಬ್ಬರು ಹೇಳಿದ್ದಾರೆ.

‘ಅಹಮದಾಬಾದ್‌–ಸೀತಾಮದೀ ಶ್ರಮಿಕ್‌ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಕಾರ್ಮಿಕರು ಹಸಿವು ತಾಳದೇ ಕಾನ್ಪುರ ರೈಲು ನಿಲ್ದಾಣದಲ್ಲಿ ಆಹಾರ ಪೊಟ್ಟಣಗಳು ಮತ್ತು ನೀರಿನ ಬಾಟಲ್‌ಗಳನ್ನು ದೋಚಿದ್ದಾರೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.