ADVERTISEMENT

ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ; ಕಿರಿಯ ಎಂಜಿನಿಯರ್‌ನನ್ನು ಬಂಧಿಸಿದ ಸಿಬಿಐ

ಉತ್ತರ ಪ್ರದೇಶ

ಪಿಟಿಐ
Published 17 ನವೆಂಬರ್ 2020, 16:56 IST
Last Updated 17 ನವೆಂಬರ್ 2020, 16:56 IST
ಸಿಬಿಐ
ಸಿಬಿಐ   

ನವದೆಹಲಿ: ಕಳೆದ ಹತ್ತು ವರ್ಷಗಳಿಂದ ಮಕ್ಕಳ ಮೇಲೆ ಲೈಂಗಿಕ ಶೋಷಣೆ ನಡೆಸುತ್ತಿದ್ದ ಉತ್ತರ ಪ್ರದೇಶದ ನೀರಾವರಿ ಇಲಾಖೆಯ ಕಿರಿಯ ಎಂಜಿನಿಯರ್‌ ಒಬ್ಬರನ್ನು ಸಿಬಿಐ ಬಂಧಿಸಿದೆ.

ಚಿತ್ರಕೂಟ, ಹಮಿರ್‌ಪುರ್ ಹಾಗೂ ಬಾಂದಾ ಜಿಲ್ಲೆಗಳಲ್ಲಿ 5 ವರ್ಷದಿಂದ 16 ವರ್ಷ ವಯಸ್ಸಿನ ಸುಮಾರು 50 ಮಕ್ಕಳನ್ನು ಲೈಂಗಿಕ ಶೋಷಣೆಗೆ ಒಳಪಡಿಸಿರುವುದಾಗಿ ಆರೋಪಿಸಲಾಗಿದೆ. ಮಕ್ಕಳ ಮೇಲೆ ದೌರ್ಜನ್ಯ ನಡೆಸಿರುವುದನ್ನು ವಿಡಿಯೊ ಮಾಡಿ, ಫೋಟೊಗಳನ್ನು ತೆಗೆದು ಅವುಗಳನ್ನು ಡಾರ್ಕ್ ವೆಬ್‌ ಮೂಲಕ ಜಗತ್ತಿನಾದ್ಯಂತ ಮಾರಾಟ ಮಾಡಿದ್ದಾರೆಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.

ಸಿಬಿಐನ ಪ್ರಾಥಮಿಕ ವಿಚಾರಣೆಯಲ್ಲಿ ಕಿರಿಯ ಎಂಜಿನಿಯರ್‌ ತನ್ನ ಚಟುವಟಿಕೆಗಳ ಕುರಿತು ವಿವರ ನೀಡಿರುವುದು ತಿಳಿದು ಬಂದಿದೆ. ಬಾಂದಾ, ಹಮಿರ್‌ಪುರ್‌ ಹಾಗೂ ಚಿತ್ರಕೂಟ ಜಿಲ್ಲೆಗಳಲ್ಲಿ ಬಡತನದಲ್ಲಿರುವ ಮಕ್ಕಳನ್ನು ಬಳಸಿಕೊಂಡು ಗುಟ್ಟಾಗಿ ಕಾರ್ಯಾಚರಿಸಿರುವುದಾಗಿ ಹೇಳಿದ್ದಾಗಿ ವರದಿಯಾಗಿದೆ.

ADVERTISEMENT

ಆನ್‌ಲೈನಲ್ಲಿ ಮಕ್ಕಳ ಮೇಲಿನ ಲೈಂಗಿನ ದೌರ್ಜನ್ಯದ ವಿಡಿಯೊ, ಫೋಟೊ ಕಂಟೆಂಟ್‌ಗಳ ಬಗ್ಗೆ ನಿಗಾವಹಿಸಿರುವ ಸಿಬಿಐನ ವಿಶೇಷ ಘಟಕವು, ಕಿರಿಯ ಎಂಜಿನಿಯರ್‌ನನ್ನು ಹಲವು ದಿನ ಗಮನಿಸಿ ಆತನ ಚಟುವಟಿಕೆಗಳನ್ನು ಬಹಿರಂಗ ಪಡಿಸಿದೆ. ಚಿತ್ರಕೂಟ ನಿವಾಸಿಯಾಗಿರುವ ಕಿರಿಯ ಎಂಜಿನಿಯರ್‌ನನ್ನು ಬಾಂದಾದಲ್ಲಿ ಸಿಬಿಐ ತಂಡ ಬಂಧಿಸಿದೆ.

'ಆತ ಡಾರ್ಕ್ ವೆಬ್‌ ಬಳಸಿಕೊಂಡು ಮಕ್ಕಳ ಲೈಂಗಿನ ದೌರ್ಜನ್ಯದ ಹಲವು ವಿಡಿಯೊಗಳನ್ನು ಭಾರತದಲ್ಲಿ ಹಾಗೂ ವಿದೇಶಗಳಿಗೆ ಮಾರಾಟ ಮಾಡಿರುವುದು ತಿಳಿದು ಬಂದಿದೆ. ಆತನ ಮನೆಯಲ್ಲಿ ಪರಿಶೀಲನೆ ನಡೆಸಿದಾಗ, ಸುಮಾರು ₹8 ಲಕ್ಷ ಹಣ, ಮೊಬೈಲ್‌ ಫೋನ್‌ಗಳು, ಲ್ಯಾಪ್‌ಟಾಪ್‌ಗಳು, ವೆಬ್‌–ಕ್ಯಾಮೆರಾ, ಪೆನ್‌ ಡ್ರೈವ್‌, ಮೆಮೊರಿ ಕಾರ್ಡ್‌ ಸೇರಿದಂತೆ ಡೇಟಾ ಸಂಗ್ರಹಿಸುವ ಹಲವು ಸಾಧನಗಳು ಹಾಗೂ ಲೈಂಗಿಕ ಆಟಿಗಳು ದೊರೆತಿವೆ‘ ಅವುಗಳನ್ನು ವಶಪಡಿಸಿಕೊಂಡಿರುವುದಾಗಿ ಸಿಬಿಐನ ವಕ್ತಾರ ಆರ್‌.ಕೆ.ಗೌರ್‌ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.