ಸಂಗ್ರಹ ಚಿತ್ರ –ರಾಯಿಟರ್ಸ್
ಲಖನೌ: ಉತ್ತರ ಪ್ರದೇಶದ ಮುಜಾಫ್ಫರ್‌ನಗರ ಜಿಲ್ಲೆಯಲ್ಲಿ ಇತ್ತೀಚೆಗೆ ನಾಪತ್ತೆಯಾಗಿದ್ದ ಯುವತಿಯ ಪ್ರಕರಣ ಮಹತ್ವದ ತಿರುವು ಪಡೆದುಕೊಂಡಿದೆ. ಆಕೆಯ ಮೇಲೆ ಅತ್ಯಾಚಾರವೆಸಗಿ, ಕೊಲೆ ಮಾಡಲು ಸಂಬಂಧಿಯೇ ಸುಪಾರಿ ನೀಡಿದ್ದ ಎಂಬ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ.
ಆರೋಪಿಯನ್ನು ಆಶೀಷ್ ಕುಮಾರ್ ಎಂದು ಗುರುತಿಸಲಾಗಿದೆ. ಈತ, ಇಬ್ಬರಿಗೆ ಸುಪಾರಿ ನೀಡುವುದಕ್ಕಾಗಿ ಬ್ಯಾಂಕ್‌ನಿಂದ ₹ 40,000 ಸಾಲ ಪಡೆದಿದ್ದ. ಅವರಿಬ್ಬರು, ಯುವತಿಯ ಮೇಲೆ ಅತ್ಯಾಚಾರವೆಸಗಿ, ಕೊಲೆ ಮಾಡಿ ನಂತರ ಆಕೆಯ ಗುರುತು ಸಿಗದಂತೆ ಪೆಟ್ರೋಲ್ ಸುರಿದು ಶವವನ್ನು ಸುಟ್ಟುಹಾಕಲು ನೆರವಾಗಿದ್ದರು ಎಂಬುದು ಬಹಿರಂಗವಾಗಿದೆ.
ಮುಜಾಫ್ಫರ್‌ನಗರ ಪೊಲೀಸ್ ವರಿಷ್ಠಾಧಿಕಾರಿ (ಗ್ರಾಮೀಣ) ಆದಿತ್ಯ ಬನ್ಸಾಲ್ ಅವರು ಪ್ರಕರಣದ ಕುರಿತು ಮಾಹಿತಿ ನೀಡಿದ್ದಾರೆ.
ಬುಧಾನ ಪ್ರದೇಶದ ನಿವಾಸಿಯಾಗಿದ್ದ ಸಂತ್ರಸ್ತೆಯು, 2024ರ ಡಿಸೆಂಬರ್ 21ರಂದು ಕಾಣೆಯಾಗಿದ್ದರು. ಈ ಸಂಬಂಧ ನಾಪತ್ತೆ ಪ್ರಕರಣ ದಾಖಲಾಗಿತ್ತು. ಸಂತ್ರಸ್ತೆ, ಆಶಿಷ್ ಹಾಗೂ ಆತನ ಇಬ್ಬರು ಸ್ನೇಹಿತರೊಂದಿಗೆ ಕೊನೆಯದಾಗಿ ಕಾಣಿಸಿಕೊಂಡಿದ್ದರು ಎಂಬುದು ತನಿಖೆ ವೇಳೆ ಗೊತ್ತಾಗಿತ್ತು. ಅದರಂತೆ, ಆಶಿಷ್‌ನನ್ನು ವಿಚಾರಣೆಗೆ ಒಳಪಡಿಸಿದಾಗ, ಕೃತ್ಯದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ. ಬಳಿಕ, ಸರ್ಧಾನ ಪ್ರದೇಶದಲ್ಲಿ ಮೂಳೆಗಳನ್ನು ಶನಿವಾರ ವಶಕ್ಕೆ ಪಡೆಯಲಾಗಿದೆ ಎಂದಿದ್ದಾರೆ.
ಖಾಸಗಿ ಆಸ್ಪತ್ರೆಯಲ್ಲಿ ವಾರ್ಡ್ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಆಶಿಷ್, ಕೊಲೆಯಾದ ಯುವತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದೆ ಎಂದು ಹೇಳಿಕೊಂಡಿದ್ದಾನೆ. ಆಕೆಯ ಬೇಡಿಕೆಗಳಿಂದ ಬೇಸತ್ತು ಕೊಲೆ ಮಾಡಲು ಇಬ್ಬರು ಯುವಕರನ್ನು ಸಂಪರ್ಕಿಸಿದ್ದೆ ಎಂಬುದಾಗಿಯೂ ಹೇಳಿದ್ದಾನೆ.
ಅಪರಾಧವೆಸಗಲು ಯುವಕರು ಹಣಕ್ಕೆ ಬೇಡಿಕೆ ಇಟ್ಟಿದ್ದರು. ಅದಕ್ಕಾಗಿ ಬ್ಯಾಂಕ್‌ನಿಂದ ₹ 40,000 ಸಾಲ ಪಡೆದಿದ್ದ ಆಶಿಷ್, ಅವರಿಬ್ಬರಿಗೆ ₹ 30,000 ನೀಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಯೋಜನೆಯಂತೆ ಯುವತಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದ ಕಿಡಿಗೇಡಿಗಳು ಸಾಮೂಹಿಕ ಅತ್ಯಾಚಾರವೆಸಗಿದ್ದರು. ನಂತರ, ಕತ್ತು ಹಿಸುಕಿ ಕೊಲೆ ಮಾಡಿದ್ದರು. ಶವದ ಗುರುತು ಸಿಗದಂತೆ ಮಾಡಲು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರು ಎಂದು ವಿವರಿಸಿದ್ದಾರೆ.
ಆಶಿಷ್‌ನನ್ನು ವಶಕ್ಕೆ ಪಡೆದಿರುವ ಪೊಲೀಸರು, ಉಳಿದಿಬ್ಬರ ಬಂಧನಕ್ಕೆ ಬಲೆ ಬೀಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.