ADVERTISEMENT

ಉತ್ತರ ಪ್ರದೇಶ ಚುನಾವಣೆ | ಮಿರ್ಜಾಪುರ; ಬಿಜೆಪಿಗೆ ಸುಲಭದ ತುತ್ತಲ್ಲ

ಪ್ರಧಾನಿ ಮೋದಿ ಲೋಕಸಭಾ ಕ್ಷೇತ್ರದ ಪಕ್ಕದ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಮೇಲೆ ಎಸ್‌ಪಿ ಕಣ್ಣು

ಪಿಟಿಐ
Published 6 ಮಾರ್ಚ್ 2022, 4:41 IST
Last Updated 6 ಮಾರ್ಚ್ 2022, 4:41 IST
ಮಿರ್ಜಾಪುರದಲ್ಲಿ ನಡೆದ ಬಿಜೆಪಿ ರ್‍ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹಾಗೂ ಕೇಂದ್ರ ಸಚಿವೆ ಅನುಪ್ರಿಯಾ ಪಟೇಲ್ ಭಾಗಿಯಾಗಿದ್ದರು–ಪಿಟಿಐ ಚಿತ್ರ
ಮಿರ್ಜಾಪುರದಲ್ಲಿ ನಡೆದ ಬಿಜೆಪಿ ರ್‍ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹಾಗೂ ಕೇಂದ್ರ ಸಚಿವೆ ಅನುಪ್ರಿಯಾ ಪಟೇಲ್ ಭಾಗಿಯಾಗಿದ್ದರು–ಪಿಟಿಐ ಚಿತ್ರ   

ಮಿರ್ಜಾಪುರ: ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿನಿಧಿಸುತ್ತಿರುವ ಉತ್ತರ ಪ್ರದೇಶದ ವಾರಾಣಸಿ ಲೋಕಸಭಾ ಕ್ಷೇತ್ರದ ಪಕ್ಕದ ಜಿಲ್ಲೆ ಮಿರ್ಜಾಪುರ. ಈ ಜಿಲ್ಲೆಯ ಎಲ್ಲ ಕ್ಷೇತ್ರಗಳನ್ನು 2017ರ ಚುನಾವಣೆಯಲ್ಲಿ ‘ಮೋದಿ ಅಲೆ’ಯಲ್ಲಿ ಸಲೀಸಾಗಿ ಗೆದ್ದುಕೊಂಡಿದ್ದ ಬಿಜೆಪಿಗೆ ಈ ಬಾರಿ ಕಠಿಣ ಸ್ಪರ್ಧೆ ಎದುರಾಗಿದೆ.ಐದು ವಿಧಾನಸಭಾ ಕ್ಷೇತ್ರಗಳಾದ ಚುನಾರ್, ಮರಿಯನ್, ಮಿರ್ಜಾಪುರ ನಗರ, ಮಝವಾನ್, ಛನ್‌ಬೇಗಳಲ್ಲಿ ಸೋಮವಾರ ಕೊನೆಯ ಹಂತದ ಮತದಾನ ನಡೆಯಲಿದ್ದು, ಸಮಾಜವಾದಿ ಪಕ್ಷವು (ಎಸ್‌ಪಿ) ಪ್ರಬಲ ಪೈಪೋಟಿ ನೀಡುತ್ತಿದೆ.

ಬಿಎಸ್‌ಪಿ ಹಾಗೂ ಕಾಂಗ್ರೆಸ್ ಪಕ್ಷಗಳೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಬಹುಕೋನ ಸ್ಪರ್ಧೆ ಇದೆ. ಜಿಲ್ಲೆಯ ಹಲವು ಜನರಲ್ಲಿ ಆಡಳಿತ ವಿರೋಧಿ ಭಾವನೆ ಎದ್ದು ಕಾಣುತ್ತಿದೆ ಎನ್ನಲಾಗಿದೆ. ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಒಂದು ಕ್ಷೇತ್ರವನ್ನು ನಿಷಾದ್ ಪಕ್ಷಕ್ಕೆ ಬಿಟ್ಟುಕೊಟ್ಟಿದೆ.

ಪ್ರಾದೇಶಿಕ ಪಕ್ಷಗಳಾದ ಅಪ್ನಾ ದಳ(ಕಮೆರವಾದಿ) ಹಾಗೂ ಓಂಪ್ರಕಾಶ್ ರಾಜ್‌ಭರ್ ನೇತೃತ್ವದ ಸುಹೇಲ್‌ದೇವ್ ಭಾರತ್ ಸಮಾಜ ಪಾರ್ಟಿ (ಎಸ್‌ಬಿಎಸ್‌ಪಿ) ಜೊತೆ ಮೈತ್ರಿ ಮಾಡಿಕೊಂಡು ಕಣಕ್ಕೆ ಧುಮುಕಿರುವ ಅಖಿಲೇಶ್ ಯಾದವ್, 2017ರಲ್ಲಿ ಬಿಜೆಪಿಗೆ ಸಿಕ್ಕಿದ್ದ ಗೆಲುವನ್ನು ಈ ಬಾರಿ ಕಿತ್ತುಕೊಳ್ಳಲು ಸರ್ವ ಪ್ರಯತ್ನ ಮಾಡುತ್ತಿದ್ದಾರೆ.

ADVERTISEMENT

ಹಿಂದಿನ ಚುನಾವಣೆಯಲ್ಲಿ ವಾರಾಣಸಿಯ ಎಲ್ಲ ಎಂಟು ವಿಧಾನಸಭಾ ಕ್ಷೇತ್ರಗಳನ್ನು ಬಿಜೆಪಿ ಗೆದ್ದುಕೊಂಡಿತ್ತು.

ಹಲವು ವಿಚಾರಗಳು ಚುನಾವಣೆಯಲ್ಲಿ ಪ್ರಭಾವ ಬೀರಲಿವೆ. ವಾರಾಣಸಿಯಿಂದ 50 ಕಿಲೋಮೀಟರ್ ದೂರದಲ್ಲಿರುವ ವಿಂಧ್ಯಾಚಲ ದೇವಸ್ಥಾನದಿಂದ ಮಿರ್ಜಾಪುರ ಹೆಸರಾಗಿದೆ. ಕಾಶಿ ವಿಶ್ವನಾಥ ಕಾರಿಡಾರ್ ಮಾದರಿಯಲ್ಲಿ, ವಿಂಧ್ಯ ಯೋಜನೆಯಡಿ ಸ್ಥಳೀಯರ 930 ಮನೆಗಳನ್ನು ತೆರವು ಮಾಡಲಾಗಿತ್ತು. ಈ ಕಾರಣಕ್ಕೆ ಸ್ಥಳೀಯ ಬಿಜೆಪಿ ಮುಖಂಡರು ಹಾಗೂ ರಾಜ್ಯ ಸರ್ಕಾರದ ಮೇಲೆ ಇಲ್ಲಿನ ಜನ ಮುನಿಸಿಕೊಂಡಿದ್ದಾರೆ ಎನ್ನಲಾಗಿದೆ.

ಯೋಜನೆಗಾಗಿ ಜಾಗ ಬಿಟ್ಟುಕೊಟ್ಟಿದ್ದ ಮನೆ ಮಾಲೀಕರಿಗೆ ಮಾರುಕಟ್ಟೆ ದರಕ್ಕಿಂತ ಕಡಿಮೆ ಹಣ ನೀಡಲಾಗಿದೆ ಎಂದು ಶಿವರಾಮ್ ಮಿಶ್ರಾ ಎಂಬುವರು ಹೇಳುತ್ತಾರೆ. ರಸ್ತೆ ವಿಸ್ತರಣೆಗಾಗಿ ಬ್ರಾಹ್ಮಣರು ಹಾಗೂ ವೈಶ್ಯರ ಮನೆಗಳನ್ನುತೆರವು ಮಾಡಲಾಗಿದೆ. ಆದರೆ ಠಾಕೂರ್‌ ಸಮುದಾಯಕ್ಕೆ ಸೇರಿದವರ ಮನೆಗಳನ್ನು ಜಾಣ್ಮೆಯಿಂದ ಕೈಬಿಡಲಾಗಿದೆ ಎಂದು ಹೆಸರು ಹೇಳಲಿ‌ಚ್ಚಿಸದ ಸ್ಥಳೀಯರೊಬ್ಬರು ಆರೋಪಿಸುತ್ತಾರೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಠಾಕೂರ್ ಸಮುದಾಯಕ್ಕೆ ಸೇರಿದವರು.

ಬೆಲೆ ಏರಿಕೆ ಪ್ರಮುಖ ಸಮಸ್ಯೆ ಎಂದಿರುವ ಮುಷ್ತಾಕ್ ಅಹ್ಮದ್ ಮತ್ತು ಗೋಬಿನ್ ಅಹ್ಮದ್ ಅವರು, ಬಿಜೆಪಿಗೆ ಹೋಲಿಸಿದರೆ ಎಸ್‌ಪಿ ಆಡಳಿತ ಉತ್ತಮವಾಗಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.

ಅಖಿಲೇಶ್ ಅವರನ್ನು ಮತ್ತೆ ಮುಖ್ಯಮಂತ್ರಿಯನ್ನಾಗಿ ನೋಡುವ ಅಭಿಲಾಷೆ ಇಲ್ಲಿನ ಜನರದ್ದಾಗಿದ್ದು,ಮಿರ್ಜಾಪುರದಲ್ಲಿ ಎಸ್‌ಪಿ ಖಂಡಿತವಾಗಿ ಗೆಲ್ಲಲಿದೆ ಎಂದು ಪಕ್ಷದ ಕಾರ್ಯಕರ್ತರು ವಿಶ್ವಾಸ ವ್ಯಕ್ತಪಡಿಸುತ್ತಾರೆ.

*

ವಿಂಧ್ಯ ಯೋಜನೆಗಾಗಿ ಜನರು ತಮ್ಮ ಮನೆಗಳನ್ನು ಬಿಟ್ಟುಕೊಡಬೇಕಾದ ಸಂದರ್ಭ ಎದುರಾಗಿದ್ದಾಗ, ಬಿಜೆಪಿ ಶಾಸಕ ರತ್ನಾಕರ್ ಮಿಶ್ರಾ ಅವರು ಸ್ಥಳೀಯರ ಬೆಂಬಲಕ್ಕೆ ಬರಲಿಲ್ಲ.
-ಮಿರ್ಜಾಪುರದ ಸ್ಥಳೀಯ

*

ಜನರಿಗೆ ಏನೇ ಅಸಮಾಧಾನವಿದ್ದರೂ ಮೋದಿ ಅವರ ರ್‍ಯಾಲಿ ಬಳಿಕ ಎಲ್ಲ ಸರಿಯಾಗಲಿದೆ. ಎಸ್‌ಪಿ ಅವಧಿಯಲ್ಲಿದ್ದ ಗೂಂಡಾಗಿರಿಯ ಕರಾಳ ದಿನಗಳನ್ನು ಮತ್ತೆ ಎದುರಿಸಲು ಜನರು ಸಿದ್ಧರಿಲ್ಲ.
-ಮನೋಜ್ ಜೈಸ್ವಾಲ್,ನಗರ ಪರಿಷತ್ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.