ADVERTISEMENT

ಅತ್ಯಾಚಾರ ಆದ ನಂತರ ಬನ್ನಿ ಎಂದ ಉತ್ತರ ಪ್ರದೇಶದ ಪೊಲೀಸ್: ಮಹಿಳೆಯ ಆರೋಪ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2019, 11:02 IST
Last Updated 8 ಡಿಸೆಂಬರ್ 2019, 11:02 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಲಖನೌ: ತನ್ನ ಮೇಲೆ ಅತ್ಯಾಚಾರ ಯತ್ನ ನಡೆದಿದೆ ಎಂದು ಮಹಿಳೆಯೊಬ್ಬರು ದೂರು ನೀಡಲು ಹೋದಾಗ ದೂರು ದಾಖಲಿಸಲು ಉತ್ತರ ಪ್ರದೇಶದ ಪೊಲೀಸರು ನಿರಾಕರಿಸಿದ್ದಾರೆ. ಅತ್ಯಾಚಾರ ಆಗಿಲ್ಲ ತಾನೇ ? ಅತ್ಯಾಚಾರ ಆದ ಮೇಲೆ ಬನ್ನಿ ಎಂದು ಪೊಲೀಸರು ಹೇಳಿರುವುದಾಗಿ ಹಿಂದೂಪುರ್ ಗ್ರಾಮದ ಮಹಿಳೆಯೊಬ್ಬರು ಆರೋಪಿಸಿದ್ದಾರೆ.

ಮೂರು ತಿಂಗಳ ಹಿಂದೆ ನಡೆದ ಘಟನೆ ಇದು. ಔಷಧಿ ಖರೀದಿಸಲು ಹೋಗುತ್ತಿದ್ದಾಗ ಅದೇ ಊರಿನ ಮೂವರು ವ್ಯಕ್ತಿಗಳು ನನ್ನನ್ನು ತಡೆದು ನನ್ನ ಬಟ್ಟೆಎಳೆದುಅತ್ಯಾಚಾರ ಮಾಡಲು ಯತ್ನಿಸಿದರು ಎಂದು ಮಹಿಳೆ ಆರೋಪಿಸಿದ್ದಾರೆ. ಈ ಬಗ್ಗೆ ದೂರು ನೀಡಲು ಪೊಲೀಸ್ ಠಾಣೆಗೆ ಹೋದಾಗ ರೇಪ್ ತೊ ಹುವಾ ನಹೀ, ಜಬ್ ಹೋಗಾ ತಬ್ ಆನಾ (ಅತ್ಯಾಚಾರವಾಗಿಲ್ಲ ತಾನೇ, ಆದಾಗ ಬನ್ನಿ) ಎಂದು ಪೊಲೀಸರು ಹೇಳಿದ್ದಾರೆ.

ಮೂರು ತಿಂಗಳಿನಿಂದ ನಾನು ಪೊಲೀಸ್ ಠಾಣೆಗೆ ಬಂದು ದೂರು ನೀಡುತ್ತಿದ್ದರೂ ಅವರು ದೂರು ಸ್ವೀಕರಿಸುತ್ತಿಲ್ಲ.ಈ ಘಟನೆ ನಡೆದ ನಂತರ ನಾನು ಮಹಿಳಾ ಸಹಾಯವಾಣಿ 1090ಕ್ಕೆ ಕರೆ ಮಾಡಿದೆ. ಅವರು ದೂರವಾಣಿ ಸಂಖ್ಯೆ 100ಕ್ಕೆ ಕರೆ ಮಾಡುವಂತೆ ಹೇಳಿದರು. ಈ ಸಂಖ್ಯೆಗೆ ಕರೆ ಮಾಡಿದಾಗ ಉನ್ನಾವ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುವಂತೆ ಹೇಳಿದರು. ಠಾಣೆಗೆ ಹೋಗಿ ದೂರು ನೀಡಿದರೆ ಪೊಲೀಸರು ಪ್ರಕರಣ ದಾಖಲಿಸಲು ನಿರಾಕರಿಸುತ್ತಿದ್ದಾರೆ.

ಆರೋಪಿಗಳು ಈಗ ನನಗೆ ಕೊಲೆ ಬೆದರಿಕೆಯನ್ನೊಡ್ಡಿದ್ದಾರೆ. ಅವರು ಪ್ರತಿದಿನ ನನ್ನ ಮನೆಗೆ ಬಂದು, ದೂರು ದಾಖಲಿಸಿದರೆ ಅದರ ಪರಿಣಾಮ ಎದುರಿಸಲು ಸಿದ್ಧವಾಗಿರು ಎಂದು ಬೆದರಿಕೆಯೊಡ್ಡಿ ಹೋಗುತ್ತಿದ್ದಾರೆ ಎಂದು ಮಹಿಳೆ ಹೇಳಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.