ADVERTISEMENT

ಮೇಘಸ್ಫೋಟ | ಉತ್ತರಾಖಂಡದ ಚಮೋಲಿಯಲ್ಲಿ ಪ್ರವಾಹ; ಮಹಿಳೆ ಸಾವು, ಇಬ್ಬರು ನಾಪತ್ತೆ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2025, 14:17 IST
Last Updated 23 ಆಗಸ್ಟ್ 2025, 14:17 IST
<div class="paragraphs"><p>ಉತ್ತರಾಖಂಡದ ಚಮೋಲಿ ಜಿಲ್ಲೆಯ ಥರಾಲಿ ಪಟ್ಟಣದ ಮನೆಗಳು ಮೇಘಸ್ಫೋಟದಿಂದ ಉಂಟಾದ ಪ್ರವಾಹದಿಂದ ಹಾನಿಗೊಂಡಿವೆ</p></div>

ಉತ್ತರಾಖಂಡದ ಚಮೋಲಿ ಜಿಲ್ಲೆಯ ಥರಾಲಿ ಪಟ್ಟಣದ ಮನೆಗಳು ಮೇಘಸ್ಫೋಟದಿಂದ ಉಂಟಾದ ಪ್ರವಾಹದಿಂದ ಹಾನಿಗೊಂಡಿವೆ

   

–ಪಿಟಿಐ ಚಿತ್ರ

ಲಖನೌ/ಗೋಪೇಶ್ವರ್‌: ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಧರಾಲಿ ಗ್ರಾಮದಲ್ಲಿ ಇತ್ತೀಚೆಗೆ ಸಂಭವಿಸಿದ್ದ ಮೇಘಸ್ಫೋಟದಿಂದ ಪ್ರವಾಹ ಉಂಟಾಗಿ ಏಳು ಮಂದಿ ಮೃತಪಟ್ಟ ಘಟನೆ ಮಾಸುವ ಮುನ್ನವೇ ಚಮೋಲಿ ಜಿಲ್ಲೆಯ ಥರಾಲಿ ಪಟ್ಟಣದಲ್ಲಿ ಶುಕ್ರವಾರ ರಾತ್ರಿ ಮೇಘಸ್ಫೋಟ ಸಂಭವಿಸಿ ಅಪಾರ ಪ್ರಮಾಣದ ಹಾನಿ ಉಂಟಾಗಿದೆ.

ADVERTISEMENT

ಘಟನೆಯಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದು, ಇಬ್ಬರು ನಾಪತ್ತೆಯಾಗಿದ್ದಾರೆ. 11 ಮಂದಿ ಗಾಯಗೊಂಡಿದ್ದು, ವೈದ್ಯಕೀಯ ನೆರವು ಒದಗಿಸಲಾಗಿದೆ.

ಪರ್ವತದಿಂದ ರಭಸವಾಗಿ ನುಗ್ಗಿದ ಪ್ರವಾಹ ತನ್ನೊಟ್ಟಿಗೆ ಅಪಾರ ಪ್ರಮಾಣದ ಮಣ್ಣಿನ ರಾಶಿಯನ್ನೂ ಹೊತ್ತುತಂದಿದ್ದು, ಮನೆಗಳು, ಅಂಗಡಿ–ಮಳಿಗೆಗಳು ಹಾಗೂ ವಾಹನಗಳ ಮೇಲೆ ಅದು ಜಮೆಯಾಗಿದೆ. ಥರಾಲಿ ಮಾರುಕಟ್ಟೆ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ತೀವ್ರ ಸ್ವರೂಪದ ಹಾನಿ ಉಂಟಾಗಿದೆ. ಇಡೀ ಮಾರುಕಟ್ಟೆಯು ಮಣ್ಣಿನ ರಾಶಿಯಿಂದ ಆವೃತವಾಗಿದೆ. ವಸತಿ ಪ್ರದೇಶ ಹಾಗೂ ಅಂಗಡಿಗಳ ಮೇಲೆ ಮಣ್ಣಿನ ರಾಶಿ ಹಾಗೂ ಅವಶೇಷಗಳು ಹರಡಿವೆ ಎಂದು ಜಿಲ್ಲಾಧಿಕಾರಿ ಸಂದೀಪ್‌ ತಿವಾರಿ ತಿಳಿಸಿದ್ದಾರೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್‌) ಹಾಗೂ ಇಂಡೋ–ಟಿಬೆಟನ್‌ ಗಡಿ ಪೊಲೀಸ್‌ ಸಿಬ್ಬಂದಿ (ಐಟಿಬಿಪಿ) ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯ ಕೈಗೊಂಡಿದ್ದಾರೆ. ಅವಶೇಷಗಳ ತೆರವು ಹಾಗೂ ಸಂತ್ರಸ್ತರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸುವ ಕಾರ್ಯ ನಡೆದಿದೆ. 

ಅನೇಕ ರಸ್ತೆಗಳು ಅವಶೇಷಗಳಿಂದಾಗಿ ಮುಚ್ಚಿಹೋಗಿವೆ. ಸಾಗ್ವಾರಾ ಗ್ರಾಮದಲ್ಲಿ ಅವಶೇಷಗಳಡಿ ಕೆಲವರು ಸಿಲುಕಿರುವ ಸಾಧ್ಯತೆ ಇದೆ. ಅನೇಕ ಪ್ರದೇಶಗಳಲ್ಲಿ ಶಾಲೆಗಳನ್ನು ಮುಚ್ಚಲಾಗಿದೆ.

ಬಾಧಿತ ಪ್ರದೇಶದ ಜನರಿಗೆ ಅಗತ್ಯ ನೆರವು ಒದಗಿಸುವಂತೆ ಹಾಗೂ ರಕ್ಷಣಾ ಕಾರ್ಯ ಕೈಗೊಳ್ಳುವಂತೆ ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ ಸೂಚಿಸಿದ್ದಾರೆ.

ಉತ್ತರಾಖಂಡದ ವಿವಿಧೆಡೆ ಕೆಲ ದಿನಗಳಿಂದ ಭಾರಿ ಮಳೆ ಸುರಿಯುತ್ತಿದ್ದು, ಅನೇಕ ಕಡೆಗಳಲ್ಲಿ ಭೂಕುಸಿತ ಹಾಗೂ ಪ್ರವಾಹ ಉಂಟಾಗುವ ಆತಂಕ ಎದುರಾಗಿದೆ. ಇದು ಚಾರ್‌ಧಾಮ ಯಾತ್ರೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.

ಉತ್ತರಾಖಂಡದ ಚಮೋಲಿ ಜಿಲ್ಲೆಯ ಥರಾಲಿ ಪಟ್ಟಣದಲ್ಲಿ ಸಿಬ್ಬಂದಿಯು ರಕ್ಷಣಾ ಕಾರ್ಯ ಕೈಗೊಂಡಿದ್ದರು

ಭಾರಿ ಮಳೆ: ಐವರ ಸಾವು

ರಾಂಚಿ/ಸರಾಯ್‌ಕೆಲಾ: ಜಾರ್ಖಂಡ್‌ ಭಾಗದಲ್ಲಿ ಶನಿವಾರ ಬೆಳಿಗ್ಗೆ ಸುರಿದ ಭಾರಿ ಮಳೆಯಿಂದಾಗಿ ಐವರು ಮೃತಪಟ್ಟಿದ್ದು ಒಬ್ಬರು ನಾಪತ್ತೆಯಾಗಿದ್ದಾರೆ. ಅನೇಕರು ಗಾಯಗೊಂಡಿದ್ದಾರೆ.

ಸರಾಯ್‌ಕೆಲಾ– ಖರ್ಸಾವಾನ್‌ ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ ಮನೆ ಕುಸಿದು ಒಬ್ಬ ಮಹಿಳೆ ಹಾಗೂ ಆಕೆಯ 7 ವರ್ಷದ ಮಗ ಅಸುನೀಗಿದ್ದಾರೆ. ರಾಜ್‌ನಗರ ಬ್ಲಾಕ್‌ನ ದಾಂಡು ಗ್ರಾಮದಲ್ಲಿ ಎಂಟು ಮಂದಿ ಗಾಯಗೊಂಡಿದ್ದಾರೆ.

ಮತ್ತೊಂದು ಘಟನೆಯಲ್ಲಿ ಮನೆ ಗೋಡೆ ಬಿದ್ದು ಐದು ವರ್ಷದ ಬಾಲಕ ಮೃತಪಟ್ಟಿದ್ದು ಮೂವರು ಗಾಯಗೊಂಡಿದ್ದಾರೆ.

339 ರಸ್ತೆಗಳು ಬಂದ್‌

ಶಿಮ್ಲಾ: ಹಿಮಾಚಲ ಪ್ರದೇಶದ ವಿವಿಧೆಡೆ ಶನಿವಾರ ಸುರಿದ ಜೋರು ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ 339 ರಸ್ತೆಗಳು ಬಂದ್‌ ಆಗಿವೆ. ಮಂಡಿ ಜಿಲ್ಲೆಯಲ್ಲಿ 162 ಕುಲ್ಲೂ ಜಿಲ್ಲೆಯಲ್ಲಿ 106 ರಸ್ತೆಗಳು ಬಂದ್‌ ಆಗಿವೆ. ಮಳೆ ಅನಾಹುತದಿಂದ ₹2326 ಕೋಟಿಗೂ ಹೆಚ್ಚಿನ ಮೊತ್ತದ ಹಾನಿ ಉಂಟಾಗಿದೆ.

ಉತ್ತರಾಖಂಡದ ಚಮೋಲಿ ಜಿಲ್ಲೆಯ ಥರಾಲಿ ಪಟ್ಟಣದಲ್ಲಿ ಮಣ್ಣಿನ ರಾಶಿಯಡಿ ಸಿಲುಕಿದ್ದ ವಾಹನಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.