ಪುಷ್ಕರ್ ಸಿಂಗ್ ಧಾಮಿ
– ಪಿಟಿಐ ಚಿತ್ರ
ಡೆಹ್ರಾಡೂನ್: ಏಕರೂಪ ನಾಗರಿಕ ಸಂಹಿತೆಯು (ಯುಸಿಸಿ) ಧರ್ಮ, ಲಿಂಗ, ಜಾತಿ ಅಥವಾ ಸಮುದಾಯದ ಭೇದ ಇಲ್ಲದ ಸಾಮರಸ್ಯದ ಸಮಾಜಕ್ಕೆ ಅಡಿಪಾಯ ಹಾಕುತ್ತದೆ ಎಂದು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಹೇಳಿದ್ದಾರೆ.
‘ನಾವು ನಮ್ಮ ಭರವಸೆಗಳನ್ನು ಈಡೇರಿಸುತ್ತಿದ್ದೇವೆ. ಜಮ್ಮು ಕಾಶ್ಮೀರಕ್ಕೆ ಸಂವಿಧಾನದ 370ನೇ ವಿಧಿಯಡಿ ಇದ್ದ ವಿಶೇಷ ಸ್ಥಾನಮಾನ ರದ್ದು ಮಾಡಿದ್ದು ಇದಕ್ಕೆ ನಿದರ್ಶನ. ಭಾರತದ ಗಣರಾಜ್ಯ ಇಂದು ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಗಟ್ಟಿಯಾಗಿ ನಿಂತಿದೆ’ ಎಂದು ಅವರು ಹೇಳಿದ್ದಾರೆ.
ರಾಜ್ಯ ಬಿಜೆಪಿ ಕಚೇರಿಯಲ್ಲಿ ನಡೆದ ಗಣಾರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದ್ದಾರೆ.
2022ರ ಚುನಾವಣೆ ವೇಳೆಯಲ್ಲಿ ನಾವು ನೀಡಿದ ಭರವಸೆಯಂತೆ ಉತ್ತರಾಖಂಡದಲ್ಲಿ ಸೋಮವಾರದಿಂದ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಬರಲಿದೆ. ಸರ್ಕಾರ ರಚನೆಯಾದ ಕೂಡಲೇ ನಾವು ಈ ಬಗ್ಗೆ ಆದ್ಯತೆ ಮೇರೆಗೆ ಕೆಲಸ ಮಾಡಿದೆವು. ಯುಸಿಸಿ ಕರಡು ರಚಿಸಿ, ಕಾನೂನು ಮಾಡಿದೆವು ಎಂದು ಅವರು ಹೇಳಿದ್ದಾರೆ.
ದೇಶದ ಹಲವು ನದಿಗಳು ಉತ್ತರಾಖಂಡದಲ್ಲಿ ಹುಟ್ಟುತ್ತವೆ. ಹಾಗೆಯೇ ಉತ್ತರಾಖಂಡ ‘ಯುಸಿಸಿಯ ಗಂಗೋತ್ರಿ’ ಆಗಲಿದ್ದು, ದೇಶದ ಇತರ ಭಾಗಗಳಿಗೂ ಇದು ಹಬ್ಬುತ್ತದೆ ಎಂದು ಧಾಮಿ ನುಡಿದಿದ್ದಾರೆ.
ಇದೇ ವೇಳೆ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ತಮ್ಮ ಪಕ್ಷಕ್ಕೆ ಗೆಲುವು ತಂದುಕೊಟ್ಟ ಮತದಾರರಿಗೂ ಧಾಮಿ ಧನ್ಯವಾದ ಅರ್ಪಿಸಿದರು. ಇತ್ತೀಚೆಗೆ ನಡೆದ 11 ಸ್ಥಳೀಯಾಡಳಿತ ಸಂಸ್ಥೆಗಳ ಮೇಯರ್ ಚುನಾವಣೆಯಲ್ಲಿ 10ರಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು.
ಇದೇ ವೇಳೆ ಪಕ್ಷದ ಕಚೇರಿಯಲ್ಲಿ ಧಾಮಿಯವರಿಗೆ ಸನ್ಮಾನವೂ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.