ADVERTISEMENT

ಉತ್ತರಾಖಂಡ ನಿರ್ಗಲ್ಲು ಕುಸಿತ: ಸಾವಿನ ಸಂಖ್ಯೆ 31ಕ್ಕೆ ಏರಿಕೆ

ಸಾಗರ್ ಕುಲಕರ್ಣಿ
Published 9 ಫೆಬ್ರುವರಿ 2021, 18:41 IST
Last Updated 9 ಫೆಬ್ರುವರಿ 2021, 18:41 IST
ದುರಂತ ಸ್ಥಳದಲ್ಲಿ ನಡೆಯುತ್ತಿರುವ ರಕ್ಷಣಾ ಕಾರ್ಯ
ದುರಂತ ಸ್ಥಳದಲ್ಲಿ ನಡೆಯುತ್ತಿರುವ ರಕ್ಷಣಾ ಕಾರ್ಯ    

ತಪೋವನ (ಉತ್ತರಾಖಂಡ): ಉತ್ತರಾಖಂಡದ ನಿರ್ಗಲ್ಲು ಕುಸಿತ ದುರ್ಘಟನೆಯಲ್ಲಿ ಮೃತಪಟ್ಟ ಇನ್ನೂ ಐವರ ಮೃತದೇಹಗಳನ್ನು ಮಂಗಳವಾರ ಹೊರತೆಗೆಯಲಾಗಿದೆ. ಇದರೊಂದಿಗೆ ಸಾವಿನ ಸಂಖ್ಯೆ 31ಕ್ಕೆ ಏರಿಕೆಯಾಗಿದೆ. 175 ಜನರು ನಾಪತ್ತೆಯಾಗಿದ್ದು, ವಿವಿಧ ರಕ್ಷಣಾ ತಂಡಗಳು ಸ್ಥಳದಲ್ಲಿ ಪರಿಹಾರ ಕಾರ್ಯಾಚರಣೆಯನ್ನು ಚುರುಕುಗೊಳಿಸಿವೆ.

ತಪೋವನ- ವಿಷ್ಣುಗಡ ಯೋಜನೆ ಯ ಸುರಂಗದಲ್ಲಿ ಕೆಲಸ ಮಾಡುತ್ತಿದ್ದ ಸುಮಾರು 30 ಜನರನ್ನು ರಕ್ಷಿಸುವ ಪ್ರಯತ್ನಗಳು ನಡೆದಿವೆ. ಕಾರ್ಮಿಕರು 12 ಅಡಿ ಎತ್ತರ ಮತ್ತು ಸುಮಾರು 2.5 ಕಿ.ಮೀ ಉದ್ದದ ‘ಹೆಡ್ ರೇಸ್ ಟನಲ್’ನಲ್ಲಿ ಸಿಕ್ಕಿಬಿದ್ದಿದ್ದಾರೆ ಎನ್ನಲಾಗಿದೆ.

ಎನ್‌ಟಿಪಿಸಿಯ ವಿದ್ಯುತ್‌ ಘಟಕದ ಸುರಂಗದಲ್ಲಿ ಸಿಲುಕಿರುವ 37 ಕಾರ್ಮಿಕರ ರಕ್ಷಣೆಗೆ ಸೇನೆಯು ನಿರಂತರ ಪ್ರಯತ್ನಗಳನ್ನು ನಡೆಸುತ್ತಿದೆ. ಕಮಾನಿನ ಆಕೃತಿಯ 1.8 ಕಿ.ಮೀ. ಉದ್ದದ ಸುರಂಗದಲ್ಲಿ ಈ ಕಾರ್ಮಿಕರು ಸಿಲುಕಿದ್ದಾರೆ. ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ಜೆಸಿಬಿ ಹಾಗೂ ಇತರ ಯಂತ್ರಗಳು ಭಾನುವಾರದಿಂದ ಬಿಡುವಿಲ್ಲದೆ ಕೆಲಸ ಮಾಡುತ್ತಿವೆ.

ADVERTISEMENT

‘ಸುರಂಗದೊಳಗೆ ತುಂಬಾ ಕೆಸರು ತುಂಬಿಕೊಂಡಿದೆ. ಅದನ್ನು ತೆರವುಗೊಳಿಸಲು ಅಗತ್ಯ ಯಂತ್ರಗಳು ಹಾಗೂ ಜನರನ್ನು ನೀಡಲಾಗಿದೆ. ಸುರಂಗದ ಮೇಲ್ಭಾಗದಿಂದ ಒಳನುಗ್ಗಿ, ಒಳಗೆ ಸಿಲುಕಿರುವವರನ್ನು ರಕ್ಷಿಸುವ ಪ್ರಯತ್ನಗಳೂ ನಡೆಯುತ್ತಿವೆ’ ಎಂದು ಮೇಜರ್‌ ಜನರಲ್‌ ರಾಜೀವ್‌ ಛಿಬ್ಬರ್‌ ವರದಿಗಾರರಿಗೆ ತಿಳಿಸಿದ್ದಾರೆ.

ಸುರಂಗದೊಳಗೆ ಆಮ್ಲಜನಕದ ಪ್ರಮಾಣವು ತುಂಬಾ ಕಡಿಮೆ ಇರುವುದರಿಂದ ಒಳಗೆ ಸಿಲುಕಿಕೊಂಡವರು ಬದುಕಿ ಉಳಿಯುವ ಸಾಧ್ಯತೆ ತೀರಾ ವಿರಳ ಎಂದೂ ರಕ್ಷಣಾ ಕಾರ್ಯದಲ್ಲಿ ತೊಡಗಿರುವ ಸಿಬ್ಬಂದಿ ಹೇಳುತ್ತಿದ್ದಾರೆ. ‘ಭಾನುವಾರವೇ ನಾವು 17 ಮಂದಿಯನ್ನು ರಕ್ಷಿಸಿದ್ದೆವು. ಆದ್ದರಿಂದ, ನಾವು ಇನ್ನೂ ಆಶಾಭಾವದಿಂದಿದ್ದೇವೆ. ಜನರ ರಕ್ಷಣೆಗಾಗಿ ಸಾಧ್ಯವಾಗುವ ಎಲ್ಲಾ ಪ್ರಯತ್ನ
ಗಳನ್ನೂ ಮಾಡುತ್ತೇವೆ’ ಎಂದು ಐಟಿಬಿಪಿಯ ಅಸಿಸ್ಟೆಂಟ್‌ ಕಮಾಂಡರ್ ಶೇರ್‌ಸಿಂಗ್‌ ಬುಟೋಲ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಸುರಂಗದೊಳಗೆ ಜೆಸಿಬಿಯಂಥ ಯಂತ್ರಗಳ ಬಳಕೆಗೆ ಕೆಲವು ಅಡೆತಡೆಗಳಿವೆ. ಮುಂದೆ ಹೋದಂತೆಲ್ಲಾ ಸುರಂಗದ ಅಗಲ ಕಡಿಮೆಯಾಗುತ್ತದೆ. ಯಂತ್ರಗಳ ಬಳಕೆಯಿಂದ ಸುರಂಗ ಕುಸಿಯುವ ಅಪಾಯವೂ ಇದೆ. ನಾವು ಈಗ ಸುರಂಗದೊಳಗೆ ಸಣ್ಣ ಯಂತ್ರಗಳನ್ನು ಕಳುಹಿಸುತ್ತಿದ್ದೇವೆ’ ಎಂದು ಸಿಬ್ಬಂದಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.