ADVERTISEMENT

ಉತ್ತರಾಖಂಡ ನೀರ್ಗಲ್ಲು ಕುಸಿತ; ಮೃತಪಟ್ಟವರ ಸಂಖ್ಯೆ 37ಕ್ಕೆ ಏರಿಕೆ

ಏಜೆನ್ಸೀಸ್
Published 12 ಫೆಬ್ರುವರಿ 2021, 10:48 IST
Last Updated 12 ಫೆಬ್ರುವರಿ 2021, 10:48 IST
ಉತ್ತರಾಖಂಡದಲ್ಲಿ ನೀರ್ಗಲ್ಲು ಕುಸಿತದಿಂದ ಉಂಟಾದ ಪ್ರವಾಹ ದುರಂತ
ಉತ್ತರಾಖಂಡದಲ್ಲಿ ನೀರ್ಗಲ್ಲು ಕುಸಿತದಿಂದ ಉಂಟಾದ ಪ್ರವಾಹ ದುರಂತ   

ಚಮೋಲಿ (ಉತ್ತರಾಖಂಡ): ಶುಕ್ರವಾರದಂದು ಮೈಥಾನಾ ನದಿದಡದಲ್ಲಿ ಮಗದೊಂದು ಮೃತದೇಹ ಪತ್ತೆಯಾಗುವುದರೊಂದಿಗೆ ಉತ್ತರಾಖಂಡದಲ್ಲಿ ನೀರ್ಗಲ್ಲು ಕುಸಿತದ ಪರಿಣಾಮ ಸಂಭವಿಸಿದ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 37ಕ್ಕೆ ಏರಿಕೆಯಾಗಿದೆ.

ಈ ಕುರಿತು ಚಮೋಲಿ ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದು, ರಕ್ಷಣಾ ಕಾರ್ಯಾಚರಣೆ ಜಾರಿಯಲ್ಲಿದೆ ಎಂದು ತಿಳಿಸಿದ್ದಾರೆ.

ಉತ್ತರಾಖಂಡ ಡಿಜಿಪಿ ಅಶೋಕ್ ಕುಮಾರ್ ಸಹ ಪ್ರತಿಕ್ರಿಯಿಸಿದ್ದು, ತಪೋವನ ಸುರಂಗದ 12 ಮೀಟರ್ ಕೆಳಗಿರುವ ಸಣ್ಣ ಸುರಂಗಕ್ಕೆ ಪ್ರವೇಶಿಸುವ ನಿಟ್ಟಿನಲ್ಲಿ ಕೊರೆಯುವ ಕಾರ್ಯವನ್ನು ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.

ADVERTISEMENT

ಗುರುವಾರದಂದು ರಿಷಿಗಂಗಾ ನದಿಯ ನೀರಿನ ಮಟ್ಟ ದಿಢೀರ್ ಏರಿಕೆಯಾದ ಪರಿಣಾಮ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.

ನೀರ್ಗಲ್ಲು ಕುಸಿತ ದುರಂತದಲ್ಲಿ ಈಗಲೂ 168 ಮಂದಿ ನಾಪತ್ತೆಯಾಗಿದ್ದಾರೆ ಎಂಬುದನ್ನು ಜಿಲ್ಲಾಡಳಿತ ಖಚಿತಪಡಿಸಿದೆ.

ಇದುವರೆಗೆ ದೊರಕಿರುವ 37 ಮೃತದೇಹಗಳ ಪೈಕಿ 10 ಮಂದಿಯನ್ನಷ್ಟೇ ಗುರುತಿಸಲಾಗಿದೆ. ಮೃತದೇಹಗಳನ್ನು ಡಿಎನ್‌ಎ ಪರೀಕ್ಷೆ ಬಳಿಕ ಅಂತಿಮ ಸಂಸ್ಕಾರ ನಡೆಸಲಾಗುತ್ತಿದೆ.

ದಿನದ 24 ತಾಸು ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ. ಈ ನಡುವೆ ತಪೋವನದ ರೈನಿ ಗ್ರಾಮದಲ್ಲಿ ನೀರು ಸಂಗ್ರಹ ಮಟ್ಟವನ್ನು ಅಳೆಯಲು ಎಂಟು ಸದಸ್ಯರ ಎಸ್‌ಡಿಆರ್‌ಎಫ್ ತಂಡ ಕಾಲ್ನಡಿಗೆಯಲ್ಲಿ ತೆರಳಿ ಅವಲೋಕನ ಮಾಡಲಿದ್ದು, ತದಾ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್‌ಡಿಆರ್‌ಫ್ ಡಿಐಜಿ ರಿಧಿಮ್ ಅಗರವಾಲ್ ತಿಳಿಸಿದರು.

ಏತನ್ಮಧ್ಯೆ ನೀರ್ಗಲ್ಲು ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ ನಾಲ್ಕು ಲಕ್ಷ ರೂ.ಗಳ ಪರಿಹಾರ ನಿಧಿ ನೀಡುವ ಕಾರ್ಯವನ್ನು ಸರ್ಕಾರ ಪ್ರಾರಂಭಿಸಿದೆ. ಉತ್ತರಾಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ದುರಂತದಲ್ಲಿ ಮೃತಪಟ್ಟವರಿಗೆ ತಲಾ ನಾಲ್ಕು ಲಕ್ಷ ರೂ.ಗಳ ನೆರವನ್ನು ಘೋಷಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.