ADVERTISEMENT

ದುರಂತದ ದಿನ ಹವಾಮಾನ ಸ್ಥಿತಿ ಸಹಜವಾಗಿತ್ತು: ಆರೋಪ ಅಲ್ಲಗಳೆದ ವೈಷ್ಣೋದೇವಿ ಮಂಡಳಿ

ಪಿಟಿಐ
Published 29 ಆಗಸ್ಟ್ 2025, 6:24 IST
Last Updated 29 ಆಗಸ್ಟ್ 2025, 6:24 IST
<div class="paragraphs"><p>ವೈಷ್ಣೋದೇವಿ ಯಾತ್ರಾ ಮಾರ್ಗದಲ್ಲಿ ಮೇಘಸ್ಫೋಟದಿಂದಾಗಿ ಸಂಭವಿಸಿದ ಭೂ ಕುಸಿತದಲ್ಲಿ ಮೃತಪಟ್ಟವರ ಶವ ಸಾಗಿಸುತ್ತಿರುವುದು</p></div>

ವೈಷ್ಣೋದೇವಿ ಯಾತ್ರಾ ಮಾರ್ಗದಲ್ಲಿ ಮೇಘಸ್ಫೋಟದಿಂದಾಗಿ ಸಂಭವಿಸಿದ ಭೂ ಕುಸಿತದಲ್ಲಿ ಮೃತಪಟ್ಟವರ ಶವ ಸಾಗಿಸುತ್ತಿರುವುದು

   

ಕೃಪೆ: ಪಿಟಿಐ

ಜಮ್ಮು: ಹವಾಮಾನ ಇಲಾಖೆಯ ಎಚ್ಚರಿಕೆಗಳನ್ನು ಕಡೆಗಣಿಸಿ ವೈಷ್ಣೋದೇವಿ ಯಾತ್ರೆಗೆ ಅವಕಾಶ ಕಲ್ಪಿಸಲಾಗಿತ್ತು ಎಂಬ ಆರೋಪಗಳನ್ನು ಶ್ರೀ ಮಾತಾ ವೈಷ್ಣೋದೇವಿ ದೇವಾಲಯ ಮಂಡಳಿ (SMVDSB) ನಿರಾಕರಿಸಿದೆ. ಆಗಸ್ಟ್ 26 ರಂದು ಮೇಘಸ್ಫೋಟವಾಗಿ ಭೂಕುಸಿತ ಸಂಭವಿಸುವ ಮೊದಲೇ, ಯಾತ್ರೆಯನ್ನು ಸ್ಥಗಿತಗೊಳಿಸಲಾಗಿತ್ತು ಎಂದು ಹೇಳಿದೆ.

ADVERTISEMENT

ಆದಾಗ್ಯೂ, ದುರಂತದಲ್ಲಿ ಎಷ್ಟು ಮಂದಿ ಮೃತಪಟ್ಟಿದ್ದಾರೆ ಎಂಬ ಕುರಿತು ಮಂಡಳಿಯು ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ.

ತ್ರಿಕೂಟದಲ್ಲಿರುವ ಮಾತಾ ವೈಷ್ಣೋದೇವಿ ದೇವಾಲಯಕ್ಕೆ ತೆರಳುವ ಕಾತ್ರಾ ಮಾರ್ಗದಲ್ಲಿ ಮೇಘಸ್ಫೋಟದಿಂದಾಗಿ ಸಂಭವಿಸಿದ ಭೂ ಕುಸಿತದಲ್ಲಿ 34 ಯಾತ್ರಿಕರು ಮೃತಪಟ್ಟು 18ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ನಿರ್ಲಕ್ಷ್ಯ ಆರೋಪಗಳ ಕುರಿತು ಪ್ರತಿಕ್ರಿಯಿಸಿ ಹೇಳಿಕೆ ಬಿಡುಗಡೆ ಮಾಡಿರುವ ಮಂಡಳಿ, 'ಹವಾಮಾನ ಇಲಾಖೆ ಮುನ್ಸೂಚನೆಯನ್ನು ನಿರ್ಲಕ್ಷಿಸಿ, ಯಾತ್ರಿಕರ ಸುರಕ್ಷತೆಯನ್ನು ಕಡೆಗಣಿಸಿ ಯಾತ್ರೆಗೆ ಅವಕಾಶ ನೀಡಲಾಗಿತ್ತು ಎಂಬುದಾಗಿ ಕೆಲವು ಮಾಧ್ಯಮಗಳು ವರದಿ ಮಾಡಿದ್ದವು. ನೈಸರ್ಗಿಕ ವಿಕೋಪದಲ್ಲಿ ಯಾತ್ರಿಕರ ಪ್ರಾಣಹಾನಿಯಾಗಿರುವುದಕ್ಕೆ ಮಂಡಳಿಯು ತೀವ್ರ ದುಃಖ ವ್ಯಕ್ತಪಡಿಸುತ್ತದೆ. ಮಾಧ್ಯಮಗಳ ವರದಿಗಳಿಂದ ಮೂಡಿರುವ ಸಾರ್ವಜನಿಕರಲ್ಲಿ ಮೂಡಿರುವ ಅಭಿಪ್ರಾಯಗಳನ್ನು ಸರಿಪಡಿಸಬೇಕಿದೆ. ಎಲ್ಲ ಆರೋಪಗಳು ಸುಳ್ಳು ಹಾಗೂ ಆಧಾರರಹಿತವಾದವು ಎಂಬುದನ್ನು ಮಂಡಳಿ ಸ್ಪಷ್ಟವಾಗಿ ಅಲ್ಲಗಳೆಯುತ್ತದೆ' ಎಂದು ಹೇಳಿದೆ.

ದುರಂತ ಸಂಭವಿಸಿದ ದಿನ ಬೆಳಿಗ್ಗೆ 10ರ ವರೆಗೂ ಹವಾಮಾನ ಪರಿಸ್ಥಿತಿ ಉತ್ತಮವಾಗಿತ್ತು. ಹೆಲಿಕಾಪ್ಟರ್‌ಗಳೂ ಎಂದಿನಂತೆ ಕಾರ್ಯಾಚರಣೆ ನಡೆಸುತ್ತಿದ್ದವು ಎಂದೂ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.