ADVERTISEMENT

ಅಂಚೆ ಮೂಲಕ ತಲುಪಲಿದೆ ವೈಷ್ಣೋದೇವಿ ಪ್ರಸಾದ!

ಪಿಟಿಐ
Published 31 ಆಗಸ್ಟ್ 2020, 10:28 IST
Last Updated 31 ಆಗಸ್ಟ್ 2020, 10:28 IST
ವೈಷ್ಣೋ ದೇವಿ ತೀರ್ಥ ಕ್ಷೇತ್ರ
ವೈಷ್ಣೋ ದೇವಿ ತೀರ್ಥ ಕ್ಷೇತ್ರ   

ಜಮ್ಮು: ಇಲ್ಲಿನ ರಿಯಾಸಿ ಜಿಲ್ಲೆಯ ಪ್ರಸಿದ್ಧ ಯಾತ್ರಾಸ್ಥಳ ಮಾತಾ ವೈಷ್ಣೋದೇವಿ ದೇಗುಲದ ಪ್ರಸಾದ ಇನ್ನು ಮುಂದೆ ದೇಶದಾದ್ಯಂತವಿರುವ ಭಕ್ತರ ಮನೆಬಾಗಿಲಿಗೇ ತಲುಪಲಿದೆ !

ಹೌದು, ಮಾತಾ ವೈಷ್ಣೋದೇವಿ ದೇಗುಲ ಮಂಡಳಿಯವರು ದೇಶದ ಯಾವುದೇ ಮೂಲೆಯಲ್ಲಿರುವ ಭಕ್ತರ ಮನೆ ಬಾಗಿಲಿಗೆ ಅಂಚೆ ಮೂಲಕ ಪ್ರಸಾದ ತಲುಪಿಸುವ ಸೌಲಭ್ಯವೊಂದನ್ನು ಆರಂಭಿಸಿದ್ದಾರೆ. ಈ ಸಂಬಂಧ ಆಡಳಿತ ಮಂಡಳಿಯವರುಅಂಚೆ ಇಲಾಖೆಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.

‘ಶ್ರೀಕ್ಷೇತ್ರದ ಪ್ರಸಾದವನ್ನು ಸ್ಪೀಡ್ ಪೋಸ್ಟ್‌ ಮೂಲಕ ಭಕ್ತರ ಮನೆಗಳಿಗೆ ತಲುಪಿಸುವಂತೆ ಶ್ರೀ ಮಾತಾ ವೈಷ್ಣೋದೇವಿ ದೇಗುಲ ಮಂಡಳಿಯವರು, ಅಂಚೆ ಇಲಾಖೆಯೊಂದಿಗೆ ಒಪ್ಪಂದ ಮಾಡಿಕೊಂಡಿರುವುದಾಗಿ‘ ದೇವಾಲಯ ಮಂಡಳಿಯ ಪ್ರಕಟಣೆ ತಿಳಿಸಿದೆ. ದೇವಾಲಯ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಮೇಶ್ ಕುಮಾರ್ ಮತ್ತು ಪ್ರಧಾನ ಅಂಚೆ ಕಚೇರಿಯ ನಿರ್ದೇಶಕ ಜಿ.ಕೆ. ಗೌರವ್ ಶ್ರೀವಾಸ್ತವ್ ಅವರು ಶನಿವಾರ ಈ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.

ADVERTISEMENT

ವಿಶೇಷ ಸಂದರ್ಭಗಳು ಸೇರಿದಂತೆ ಭಕ್ತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಮಂಡಳಿ ಭಕ್ತರ ಮನೆಬಾಗಿಲಿಗೆ ಪ್ರಸಾದ ತಲುಪಿಸುವ ವ್ಯವಸ್ಥೆಯನ್ನು ಪರಿಚಯಿಸಿದೆ.

‘ಕೊರೊನಾ ಸಾಂಕ್ರಾಮಿಕ ರೋಗ ಹರಡುತ್ತಿರುವ ಈ ಸಮಯದಲ್ಲಿ ಯಾತ್ರೆಯಲ್ಲಿ ಭಾಗವಹಿಸಲು ಸಾಧ್ಯವಾಗದ ಭಕ್ತರಿಗೆ ಮಂಡಳಿ ಕೈಗೊಂಡಿರುವ ಈ ಉಪಕ್ರಮ ತುಂಬಾ ನೆರವಾಗಲಿದೆ‘ ಎಂದು ದೇಗುಲದ ಮಂಡಳಿ ತಿಳಿಸಿದೆ.

ಭಕ್ತರು, ಮಂಡಳಿಯ ಅಧಿಕೃತ ವೆಬ್‌ಸೈಟ್ ಅಥವಾ ಮೊಬೈಲ್ ಸಂಖ್ಯೆ 9906019475 ಮೂಲಕ ಪ್ರಸಾದವನ್ನು ಬುಕ್ ಮಾಡಬಹುದು.

ಕೊರೊನಾ ಲಾಕ್‌ಡೌನ್ ಕಾರಣದಿಂದಾಗಿ ಮಾರ್ಚ್‌ ತಿಂಗಳಿನಿಂದ ಬಂದ್ ಮಾಡಿದ್ದ ಶ್ರೀಕ್ಷೇತ್ರವನ್ನು ಆಗಸ್ಟ್ 16ರಂದು ಪುನರಾರಂಭಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.