ADVERTISEMENT

ದೆಹಲಿ ಸಿಎಂ ಕೇಜ್ರಿವಾಲ್‌ ನಿವಾಸದ ಎದುರು ದಾಂದಲೆ: ವರದಿ ಕೇಳಿದ ಹೈಕೋರ್ಟ್‌

ಪಿಟಿಐ
Published 1 ಏಪ್ರಿಲ್ 2022, 12:45 IST
Last Updated 1 ಏಪ್ರಿಲ್ 2022, 12:45 IST
ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್‌ ನಿವಾಸದ ಎದುರು ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ ನಡೆಸಿದ ಸಂದರ್ಭ
ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್‌ ನಿವಾಸದ ಎದುರು ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ ನಡೆಸಿದ ಸಂದರ್ಭ   

ನವದೆಹಲಿ: ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ನಿವಾಸದ ಮುಂದೆ ನಡೆದ ದಾಂದಲೆ ಪ್ರಕರಣದ ತನಿಖೆ ಯಾವ ಹಂತದಲ್ಲಿದೆ ಎಂಬ ಬಗ್ಗೆ ವರದಿ ನೀಡುವಂತೆ ಪೊಲೀಸರಿಗೆ ಸೂಚಿಸಿದ ದೆಹಲಿ ಹೈಕೋರ್ಟ್‌, ಜನರ ಗುಂಪೊಂದು ದಾಳಿ ನಡೆಸುವ ಸಂದರ್ಭದಲ್ಲಿಅಗತ್ಯವಿರುವಷ್ಟು ಪೊಲೀಸರನ್ನು ಏಕೆ ನಿಯೋಜಿಸಿರಲಿಲ್ಲ ಎಂದು ಪ್ರಶ್ನಿಸಿದೆ.

ಎಎಪಿ ಶಾಸಕ ಸೌರಭ್‌ ಭಾರಧ್ವಜ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿಪಿನ್ ಸಂಘಿ ಮತ್ತು ನವೀನ್‌ ಚಾವ್ಲಾ ಅವರಿದ್ದ ಪೀಠ, ಸದ್ಯ ನಡೆಯುತ್ತಿರುವ ತನಿಖೆಯ ಬಗ್ಗೆ ಮುಚ್ಚಿದ ಲಕೋಟೆಯಲ್ಲಿ ವರದಿ ನೀಡುವಂತೆ ಸೂಚಿಸಿದೆ.

ದೆಹಲಿ ಪೊಲೀಸರ ಪರ ಹಾಜರಿದ್ದ ಹೆಚ್ಚುವರಿ ಸಾಲಿಟರ್‌ ಜನರಲ್‌ ಸಂಜಯ್‌ ಜೈನ್‌, ಘಟನೆ ಸಂಬಂಧ ಪೊಲೀಸರು ಸ್ವಯಂ ಪ್ರೇರಿತರಾಗಿ ಎಫ್‌ಐಆರ್‌ ದಾಖಲಿಸಿದ್ದಾರೆ. ಈಗಾಗಲೇ ಎಂಟು ಮಂದಿಯನ್ನು ಬಂಧಿಸಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ADVERTISEMENT

ಪೊಲೀಸರಸಹಕಾರದಿಂದಲೇ ಮುಖ್ಯಮಂತ್ರಿಗಳ ನಿವಾಸದ ಬಳಿ ದಾಳಿ ನಡೆದಿದೆ. ಇದನ್ನು ಎಸ್‌ಐಟಿ ಮೂಲಕ ವಿಚಾರಣೆ ನಡೆಸಬೇಕೆಂದು ಅರ್ಜಿದಾರರ ಪರ ವಕೀಲ ಭರತ್‌ ಗುಪ್ತಾ ಮನವಿ ಮಾಡಿದರು.

ಮಾರ್ಚ್‌ 30ರಂದು ಬಿಜೆಪಿ ಕಾರ್ಯಕರ್ತರು ಕೇಜ್ರಿವಾಲ್‌ ನಿವಾಸದ ಎದುರು ಪ್ರತಿಭಟನೆ ನಡೆಸಿದ ವೇಳೆ, ಸಿಸಿಟಿವಿ, ಬ್ಯಾರಿಯರ್‌ ಸೇರಿದಂತೆ ಆಸ್ತಿ–ಪಾಸ್ತಿಗೆ ಹಾನಿ ಉಂಟು ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.