
ನವದೆಹಲಿ: ವಂದೇ ಭಾರತ್ ಸ್ಲೀಪರ್ ರೈಲುಗಳು ಓಡಾಟಕ್ಕೆ ಸಿದ್ಧವಾಗಿದ್ದು, ಬೆಂಗಳೂರು, ಗೋವಾ, ಮುಂಬೈ, ಕೋಲ್ಕತ್ತ ಮತ್ತಿತರ ನಗರಗಳಿಗೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ 10 ಮಾರ್ಗಗಳಲ್ಲಿ ನೂತನ ಮಾದರಿಯ ರೈಲುಗಳ ಸಂಚಾರವನ್ನು ಆರಂಭಿಸಲು ಭಾರತೀಯ ರೈಲ್ವೆ ಕಾರ್ಯನಿರತವಾಗಿದೆ.
ಮೊದಲ ಎರಡು ರೈಲುಗಳು ಮುಂಬೈ ಮತ್ತು ಕೋಲ್ಕತ್ತದಲ್ಲಿ ಸಂಚರಿಸಲಿದ್ದು, ಅದಕ್ಕಾಗಿ ರೈಲು ಹಳಿಗಳು ಮತ್ತು ಸಿಗ್ನಲ್ ವ್ಯವಸ್ಥೆಯನ್ನು ಮೇಲ್ದರ್ಜೆಗೆ ಏರಿಸಲಾಗುತ್ತಿದೆ.
ಅತ್ಯುತ್ತಮ ಸೌಕರ್ಯಗಳನ್ನು ಹೊಂದಿರುವ ವಂದೇ ಭಾರತ್ ಸ್ಲೀಪರ್ ರೈಲುಗಳ ಸೇವೆಯನ್ನು ದೂರದ ರಾತ್ರಿ ಪ್ರಯಾಣಕ್ಕೆ ಮೀಸಲಿಡಲಾಗುತ್ತದೆ.
10 ವಂದೇ ಭಾರತ್ ಸ್ಲೀಪರ್ ರೈಲುಗಳನ್ನು ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (ಬಿಇಎಂಎಲ್) ನಿರ್ಮಿಸುತ್ತಿದೆ.
ಈಗಿನ ವಂದೇ ಭಾರತ್‌ಗಿಂತಲೂ ವಿಶೇಷ ಸೌಲಭ್ಯಗಳನ್ನು ಸ್ಲೀಪರ್ ರೈಲು ಹೊಂದಿರಲಿದೆ. ಹವಾನಿಯಂತ್ರಣ ವ್ಯವಸ್ಥೆ, ವೈರಸ್ ನಿಯಂತ್ರಣ ತಂತ್ರಜ್ಞಾನ ಇರಲಿದೆ. ಅಗ್ನಿ ಅವಘಡ ನಿಯಂತ್ರಣ ಸೇರಿ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.