ಹೊಸದಾಗಿ ಉದ್ಘಾಟನೆಗೊಂಡ ಎರ್ನಾಕುಳಂ–ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು
ಚಿತ್ರ ಕೃಪೆ: ಎಕ್ಸ್
ತಿರುವನಂತಪುರಂ: ಪ್ರಧಾನಿ ನರೇಂದ್ರ ಮೋದಿ ಶನಿವಾರ ಚಾಲನೆ ನೀಡಿದ ಬೆಂಗಳೂರು–ಎರ್ನಾಕುಳಂ ‘ವಂದೇ ಭಾರತ್ ಎಕ್ಸ್‌ಪ್ರೆಸ್’ ರೈಲಿನಲ್ಲಿ ಶಾಲಾ ವಿದ್ಯಾರ್ಥಿಗಳು ಆರ್‌ಎಸ್‌ಎಸ್‌ನ ಹಾಡು ಹಾಡಿರುವ ಕುರಿತು ಸಿಪಿಐ(ಎಂ) ನೇತೃತ್ವದ ಕೇರಳ ಸರ್ಕಾರ ಭಾನುವಾರ ತನಿಖೆಗೆ ಆದೇಶಿಸಿದೆ.
‘ಮಕ್ಕಳು ದೇಶಭಕ್ತಿಯ ಹಾಡು ಹಾಡಿದ್ದಾರೆ’ ಕೇಂದ್ರ ಸಚಿವ ಸುರೇಶ್ ಗೋಪಿ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.
ಮಕ್ಕಳು ಹಾಡಿದ ಹಾಡಿನ ಕುರಿತು ತನಿಖೆ ನಡೆಸಿ, ವರದಿ ಸಲ್ಲಿಸುವಂತೆ ಸಾಮಾನ್ಯ ಶಿಕ್ಷಣ ಸಚಿವ ವಿ.ಶಿವನ್‌ಕುಟ್ಟಿ ಅವರು ಸಾರ್ವಜನಿಕ ಶಿಕ್ಷಣ ನಿರ್ದೇಶಕರಿಗೆ (ಡಿಪಿಐ) ಸೂಚನೆ ನೀಡಿದ್ದಾರೆ.
‘ಸರ್ಕಾರವು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದೆ. ಸರ್ಕಾರಿ ಕಾರ್ಯಕ್ರಮದಲ್ಲಿ ಮಕ್ಕಳನ್ನು ಮುಂದಿಟ್ಟುಕೊಂಡು ಕೋಮು ಅಜೆಂಡಾವನ್ನು ಜಾರಿಗೆ ತರಲು ಯತ್ನಿಸಿದ್ದು, ಸಾಂವಿಧಾನಿಕ ತತ್ವಗಳ ಉಲ್ಲಂಘನೆಯಾಗಿದೆ. ಈ ಕುರಿತು ತಕ್ಷಣವೇ ತನಿಖೆ ನಡೆಸಿ, ವರದಿ ನೀಡಬೇಕು. ಅಧಿಕೃತ ಕಾರ್ಯಕ್ರಮದಲ್ಲಿ ಮಕ್ಕಳು ಭಾಗವಹಿಸಿದ್ದ ವೇಳೆ ಎಲ್ಲಿ ಲೋಪವಾಗಿದೆ ಎಂಬುದರ ಕುರಿತು ಪರಿಶೀಲನೆ ನಡೆಸಬೇಕು, ವರದಿ ಆಧರಿಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಶಿವನ್‌ಕುಟ್ಟಿ ಅವರ ಕಚೇರಿ ಬಿಡುಗಡೆಗೊಳಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.
‘ಶಾಲಾ ಆಡಳಿತ ಮಂಡಳಿಯು ಕೋಮು ಉದ್ದೇಶಕ್ಕಾಗಿಯೇ ಮಕ್ಕಳನ್ನು ಬಳಸಿಕೊಂಡಿದ್ದು, ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಕಾಂಗ್ರೆಸ್ ಕೂಡ ಒತ್ತಾಯಿಸಿದೆ.
‘ಸರ್ಕಾರಿ ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್ ಗೀತೆ ಹಾಡಿರುವುದು ಅಕ್ರಮ ಹಾಗೂ ಪ್ರಜಾಪ್ರಭುತ್ವ ವಿರೋಧಿ’ ಎಂದು ಕೇರಳ ವಿಧಾನಸಭೆ ವಿರೋಧ ಪಕ್ಷದ ನಾಯಕ ವಿ.ಡಿ.ಸತೀಶನ್ ಹೇಳಿದ್ದಾರೆ.
ಇದು ಮಕ್ಕಳ ಮುಗ್ಧ ಸಂಭ್ರಮವಾಗಿತ್ತು. ಆ ಕ್ಷಣಕ್ಕೆ ಮಕ್ಕಳು ತೋಚಿದ್ದನ್ನು ಹಾಡಿದ್ದಾರೆ. ಅಲ್ಲದೇ ಯಾವುದೇ ಉಗ್ರರ ಹಾಡು ಅದಾಗಿರಲಿಲ್ಲಸುರೇಶ್ ಗೋಪಿ ನೈಸರ್ಗಿಕ ಅನಿಲ ಪೆಟ್ರೋಲಿಯಂ ಖಾತೆ ರಾಜ್ಯ ಸಚಿವ
ಮಕ್ಕಳು ಹಾಡಿದ ‘ಗಾನ ಗೀತಂ’ನಲ್ಲಿ ಕೋಮು ಅಂಶದ ಯಾವ ವಿಚಾರವಿದೆ? ವಿದೇಶಗಳಲ್ಲಿ ಭಾರತ ವಿರೋಧಿ ಭಾವನೆಗಳನ್ನು ವ್ಯಕ್ತಪಡಿಸುವವರಿಗೆ ಈ ಹಾಡು ಇಷ್ಟವಾಗದಿರಬಹುದುಜಾರ್ಜ್ ಕುರಿಯನ್ ಮೀನುಗಾರಿಕೆ ಪಶುಸಂಗೋಪನೆ ರಾಜ್ಯ ಸಚಿವ
ಸಮರ್ಥಿಸಿಕೊಂಡ ಶಾಲಾ ಆಡಳಿತ ಮಂಡಳಿ
ಸಿಪಿಐ(ಎಂ) ಸರ್ಕಾರ ಹಾಗೂ ಕಾಂಗ್ರೆಸ್ ಪಕ್ಷದ ಹೇಳಿಕೆ ಕುರಿತು ಟೀಕಿಸಿರುವ ಶಾಲಾ ಆಡಳಿತ ಮಂಡಳಿ ‘ವಿವಿಧತೆಯಲ್ಲಿ ಏಕತೆ’ಯ ಉದ್ದೇಶದಿಂದಲೇ ಈ ಹಾಡು ಹಾಡಲಾಗಿದೆ ಅದರಲ್ಲಿ ಯಾವ ವಿಚಾರ ಕೋಮು ಅಂಶ ಹೊಂದಿದೆ ಎಂಬುದನ್ನು ಬಹಿರಂಗಪಡಿಸಬೇಕು’ ಎಂದು ತಿಳಿಸಿದೆ. ದಕ್ಷಿಣ ರೈಲ್ವೆ ಇಲಾಖೆಯವರು ನಿರ್ದಿಷ್ಟ ಹಾಡು ಹಾಡುವಂತೆ ಸೂಚಿಸಿರಲಿಲ್ಲ. ಮಕ್ಕಳೇ ಮಲಯಾಳ ದೇಶಭಕ್ತಿ ಗೀತೆಯನ್ನು ಹಾಡಿದ್ದಾರೆ. ‘ಎಕ್ಸ್’ನಲ್ಲಿ ಈ ಹಾಡು ತೆಗೆದುಹಾಕಿದ ಕುರಿತು ಪ್ರಧಾನಮಂತ್ರಿ ಕಚೇರಿ ಹಾಗೂ ದಕ್ಷಿಣ ರೈಲ್ವೆ ವಿಭಾಗಕ್ಕೂ ಪತ್ರ ಬರೆದು ಮಾಹಿತಿ ನೀಡಿದ್ದೇವೆ’ ಎಂದು ಎಲಮಕ್ಕರಾದ ಸರಸ್ವತಿ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್‌ನ ಪ್ರಾಂಶುಪಾಲ ಕೆ.ಪಿ.ಡಿಂಟೋ ಹೇಳಿಕೆ ನೀಡಿದ್ದಾರೆ.
‘ಶಿಕ್ಷಣ ಸಚಿವರು ಯಾವ ಕಾರಣಕ್ಕಾಗಿ ತನಿಖೆಗೆ ಆದೇಶಿಸಿದ್ದಾರೆ ಎಂದು ತಿಳಿದುಬಂದಿಲ್ಲ. ಶಿಕ್ಷಣ ಇಲಾಖೆಯು ಕಾನೂನು ಕ್ರಮಕ್ಕೆ ಮುಂದಾದರೆ ನಾವು ಕೂಡ ಕಾನೂನು ಹೋರಾಟದ ಬಗ್ಗೆ ಚಿಂತನೆ ನಡೆಸಲಿದ್ದೇವೆ. ಅಲ್ಲದೇ ದೇಶಭಕ್ತಿ ಗೀತೆ ಹಾಡಿದ ಮಕ್ಕಳನ್ನು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ‘ಸಂಘಿ ಮಕ್ಕಳು’ ಎಂದು ಟಾರ್ಗೆಟ್ ಮಾಡುತ್ತಿದ್ದಾರೆ. ಇದು ಸರಿಯಲ್ಲ’ ಎಂದು ಅವರು ಕಿಡಿಕಾರಿದ್ದಾರೆ. ವಿವಾದದ ಬಳಿಕ ‘ಎಕ್ಸ್’ನಿಂದ ಹಾಡು ತೆಗೆದುಹಾಕಿದ್ದ ದಕ್ಷಿಣ ರೈಲ್ವೆ ಭಾನುವಾರ ಹಾಡಿನ ಇಂಗ್ಲಿಷ್ ಅರ್ಥ ವಿವರಣೆ ಸಹಿತ ಮತ್ತೆ ಪೋಸ್ಟ್ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.