ADVERTISEMENT

ವಂದೇ ಮಾತರಂ: ಪಶ್ಚಿಮ ಬಂಗಾಳದಲ್ಲಿ ವಾಕ್ಸಮರ

ಪಿಟಿಐ
Published 12 ಫೆಬ್ರುವರಿ 2026, 16:07 IST
Last Updated 12 ಫೆಬ್ರುವರಿ 2026, 16:07 IST
ಟಿಎಂಸಿ ಮತ್ತು ಬಿಜೆಪಿ
ಟಿಎಂಸಿ ಮತ್ತು ಬಿಜೆಪಿ   

ಕೋಲ್ಕತ್ತ: ಸರ್ಕಾರಿ ಕಾರ್ಯಕ್ರಮಗಳಲ್ಲಿ ರಾಷ್ಟ್ರಗೀತೆ ‘ಜನ ಗಣ ಮನ’ಕ್ಕೂ ಮುನ್ನ ‘ವಂದೇ ಮಾತರಂ’ನ ಎಲ್ಲ ಆರು ಚರಣಗಳನ್ನು ಹಾಡಬೇಕು ಎಂದು ಕೇಂದ್ರ ಸರ್ಕಾರ ಹೊರಡಿಸಿರುವುದು ಪಶ್ಚಿಮ ಬಂಗಾಳದಲ್ಲಿ ತೀವ್ರ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ. 

ಕೇಂದ್ರದ ಈ ಆದೇಶವು ರವೀಂದ್ರನಾಥ ಟ್ಯಾಗೋರ್‌ ಅವರನ್ನು ಅವಮಾನಿಸುವಂತಿದೆ ಮತ್ತು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜಕೀಯ ಲಾಭಗಳಿಸುವ ಉದ್ದೇಶವನ್ನು ಹೊಂದಿದೆ ಎಂದು ಟಿಎಂಸಿ ಬಣ್ಣಿಸಿದರೆ, ಕಾಂಗ್ರೆಸ್‌ ಇದನ್ನು ‘ವಿಭಜಕ ತಂತ್ರ’ ಎಂದು ಜರಿದಿದೆ. 

ಆದೇಶವನ್ನು ಸಮರ್ಥಿಸಿಕೊಂಡಿರುವ ಬಿಜೆಪಿ, ‘ಇದು ಐತಿಹಾಸಿಕ ತಪ್ಪನ್ನು ಸರಿಪಡಿಸುತ್ತದೆ ಮತ್ತು ಬಂಕಿಮ ಚಂದ್ರ ಚಟ್ಟೋಪಾಧ್ಯಾಯ ಅವರು ರಚಿಸಿದ ಗೀತೆಗೆ ಪೂರ್ಣ ಗೌರವವನ್ನು ಮರುಸ್ಥಾಪಿಸುತ್ತದೆ’ ಎಂದು ಹೇಳಿದೆ. 

ADVERTISEMENT

‘ಬಂಕಿಮ ಚಂದ್ರ ಅವರ ಕೊಡುಗೆಯನ್ನು ಎತ್ತಿ ತೋರಿಸಲು ಪಕ್ಷಕ್ಕೆ ಯಾವುದೇ ಆಕ್ಷೇಪಣೆ ಇಲ್ಲ. ಆದರೆ ಕೇಂದ್ರ ಸರ್ಕಾರದ ಈ ನಿರ್ದೇಶನವು ಟ್ಯಾಗೋರ್‌ ಅವರನ್ನು ಕಡೆಗಣಿಸಿದಂತಿದೆ’ ಎಂದು ಟಿಎಂಸಿ ನಾಯಕ, ಪಶ್ಚಿಮ ಬಂಗಾಳದ ಶಿಕ್ಷಣ ಸಚಿವ ಬ್ರಾತ್ಯ ಬಸು ಆರೋಪಿಸಿದ್ದಾರೆ.

‘ಜನ ಗಣ ಮನ’ಕ್ಕೂ ಮೊದಲು ‘ವಂದೇ ಮಾತರಂ’ ಹಾಡಬೇಕು ಎಂದು ಒತ್ತಾಯಿಸುವ ಮೂಲಕ ಶ್ರೇಣಿ ವ್ಯವಸ್ಥೆ ರಚಿಸಲು ಕೇಂದ್ರ ಪ್ರಯತ್ನಿಸಿದೆ. ಈ ಪ್ರಕ್ರಿಯೆಯಲ್ಲಿ ಟ್ಯಾಗೋರ್‌ ಅವರನ್ನು ಅವಮಾನಿಸಿದೆ’ ಎಂದು ಅವರು ಟೀಕಿಸಿದ್ದಾರೆ. 

‘ವಿಧಾನಸಭಾ ಚುನಾವಣೆಗೂ ಮುನ್ನ ಕೇಂದ್ರ ಸರ್ಕಾರ ಹೊರಡಿಸಿರುವ ಈ ಆದೇಶವು ರಾಜಕೀಯ ಲೆಕ್ಕಾಚಾರಗಳನ್ನು ಒಳಗೊಂಡಿದ್ದು, ವಿಭಜನೆಯ ತಂತ್ರವಾಗಿದೆ’ ಎಂದು ಪಶ್ಚಿಮ ಬಂಗಾಳ ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ ಅಧೀರ್‌ ರಂಜನ್‌ ಚೌಧರಿ ದೂರಿದ್ದಾರೆ. 

ಈ ಆರೋಪಗಳನ್ನು ಬಿಜೆಪಿ ತಿರಸ್ಕರಿಸಿದೆ. ‘ಕೋಮು ಓಲೈಕೆಯಲ್ಲಿ ತೊಡಗಿರುವ ಕಾಂಗ್ರೆಸ್‌ ವಂದೇ ಮಾತರಂ ಗೀತೆಯ ಕೆಲ ಚರಣಗಳನ್ನು ಕತ್ತರಿಸಿತ್ತು. ಆ ಐತಿಹಾಸಿಕ ತಪ್ಪನ್ನು ಈಗ ಸರಿಪಡಿಸಲಾಗಿದೆ’ ಎಂದು ಕೇಂದ್ರ ಸಚಿವ ಸುಕಾಂತ ಮಜುಂದಾರ್‌ ಮತ್ತು ಪಶ್ಚಿಮ ಬಂಗಾಳದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸಮಿಕ್‌ ಭಟ್ಟಾಚಾರ್ಯ ಪ್ರತಿಕ್ರಿಯಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.