ಮುಂಬೈ: ಎಲ್ಗರ್ ಪರಿಷತ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾವೊವಾದಿಗಳ ಜತೆಗೆ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ಮತ್ತು ಈಗ ಕೋವಿಡ್–19ಕ್ಕೆ ತುತ್ತಾಗಿರುವ ಕವಿ ವರವರರಾವ್ ಅವರನ್ನು ಭಾನುವಾರ ಚಿಕಿತ್ಸೆಗಾಗಿ ನಾನಾವತಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
‘ಕೋವಿಡ್‌ಗೆ ಚಿಕಿತ್ಸೆ ನೀಡುತ್ತಿರುವಾಗ, ಅವರಲ್ಲಿ ನರ ಹಾಗೂ ಮೂತ್ರಕೋಶ ಸಂಬಂಧಿ ಕಾಯಿಲೆಗಳೂ ಇರುವುದು ತಿಳಿದುಬಂದಿತ್ತು. ಜೆ.ಜೆ. ಆಸ್ಪತ್ರೆಯ ವೈದ್ಯರು ಅವರನ್ನು ತಪಾಸಣೆಗೆ ಒಳಪಡಿಸಿದಾಗ ಅವರು ‘ಡೆಲಿರಿಯಂ’ನಿಂದ ಬಳಲುತ್ತಿದ್ದಾರೆ ಎಂಬುದು ಪತ್ತೆಯಾಗಿತ್ತು’ ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.
‘ಚಡಪಡಿಕೆ, ಅಸಂಗತತೆ ಮುಂತಾದವುಗಳಿಂದ ಮನಸ್ಸಿನ ಮೇಲೆ ಒತ್ತಡ ಉಂಟಾಗಿ ಒಂದು ರೀತಿಯ ಮಾನಸಿಕ ಅಸ್ವಸ್ಥ ಸ್ಥಿತಿ ಉಂಟಾಗುವುದನ್ನು ‘ಡೆಲಿರಿಯಂ’ ಎಂದು ಗುರುತಿಸಲಾಗುತ್ತದೆ. ಇದರಿಂದ ಜ್ವರ ಹಾಗೂ ಇತರ ಕೆಲವು ಅಸ್ವಸ್ಥತೆಗಳೂ ಕಾಣಿಸುತ್ತವೆ. ಇದಕ್ಕೆ ನರರೋಗ ಚಿಕಿತ್ಸೆ ನೀಡಬೇಕಾಗುವುದರಿಂದ ಅವರನ್ನು ನಾನಾವತಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಕೋವಿಡ್ ಚಿಕಿತ್ಸೆಗೆ ಅವರು ಉತ್ತಮವಾಗಿ ಸ್ಪಂದಿಸಿದ್ದಾರೆ’ ಎಂದು ವೈದ್ಯರು ಹೇಳಿದ್ದಾರೆ.
22 ತಿಂಗಳಿಂದ ನವಿಮುಂಬೈಯ ಜೈಲಿನಲ್ಲಿದ್ದ ವರವರರಾವ್ ಅವರನ್ನು ಭಾನುವಾರ ಜೆ.ಜೆ. ಆಸ್ಪತ್ರೆಗೆ ಸೇರಿಸಲಾಗಿತ್ತು. ಅವರು ಕೊರೊನಾ ಸೋಂಕಿಗೆ ಒಳಗಾಗಿರುವುದು ಪತ್ತೆಯಾದನಂತರ ಅಲ್ಲಿಂದ ಅವರನ್ನು ಸೇಂಟ್ ಜಾರ್ಜ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.