ADVERTISEMENT

ಅನುಮತಿಯಿಲ್ಲದೆ 25 ವಿವಿಗೆ ಕುಲಪತಿಗಳ ನೇಮಕ: ಪಶ್ಚಿಮ ಬಂಗಾಳ ರಾಜ್ಯಪಾಲ ಆರೋಪ

ಪಿಟಿಐ
Published 15 ಜನವರಿ 2022, 15:24 IST
Last Updated 15 ಜನವರಿ 2022, 15:24 IST
ಜಗದೀಪ್‌ ಧನಕರ್‌
ಜಗದೀಪ್‌ ಧನಕರ್‌   

ಕೋಲ್ಕತ್ತ (ಪಿಟಿಐ): ಕುಲಾಧಿಪತಿಯಾಗಿರುವ ತಮ್ಮ ಅನುಮತಿಯಿಲ್ಲದೆ ರಾಜ್ಯದ 25 ವಿಶ್ವವಿದ್ಯಾಲಯಗಳ ಕುಲಪತಿಗಳನ್ನು ನೇಮಕ ಮಾಡಲಾಗಿದೆ ಎಂದು ಪಶ್ಚಿಮ ಬಂಗಾಳದ ರಾಜ್ಯಪಾಲ ಜಗದೀಪ್‌ ಧನಕರ್‌ ಶನಿವಾರ ಆರೋಪಿಸಿದ್ದಾರೆ.

ಡೈಮಂಡ್‌ ಹಾರ್ಬರ್‌ ಮಹಿಳಾ ವಿಶ್ವವಿದ್ಯಾಲಯಕ್ಕೆ (ಡಿಎಚ್‌ಡಬ್ಯುಯು) ನೂತನ ಕುಲಪತಿಯಾಗಿ ಪ್ರೊ.ಸೋಮ ಬಂಡೋ‍ಪಾಧ್ಯಾಯ ಅವರನ್ನು ಮಮತಾ ಬ್ಯಾನರ್ಜಿ ನೇಮಿಸಿದ 24 ಗಂಟೆಯಲ್ಲಿ ರಾಜ್ಯಪಾಲ ಜಗದೀಪ್‌ ಈ ಆರೋಪ ಮಾಡಿದ್ದಾರೆ.

ಇದಕ್ಕೂ ಮುನ್ನ ದಿನಕರ್‌ ಅವರು ವಿಶ್ವವಿದ್ಯಾಲಯಕ್ಕೆ ಅಲ್ಲಿನ ಕಲಾ ವಿಭಾಗದ ಡೀನ್‌ ಆಗಿದ್ದ ಪ್ರೊ.ತಾಪನ್ ಮೊಂಡಾಲ್‌ ಅವರನ್ನು ಕುಲಪತಿಯಾಗಿ ನೇಮಿಸಿದ್ದರು. ಆದರೆ ವೈಯಕ್ತಿಕ ಕಾರಣಗಳಿಂದ ತಾಪನ್‌ ಹುದ್ದೆ ನಿರಾಕರಿಸಿದ್ದರು.

ADVERTISEMENT

ಇನ್ನೊಂದೆಡೆ ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ ತನ್ನ ನಿರ್ಧಾರ ಸಮರ್ಥಿಸಿಕೊಂಡಿದೆ. ಶೋಧನಾ ಸಮಿತಿಯಿಂದ ಆಯ್ಕೆಯಾದ ಕುಲಪತಿಗಳ ಹೆಸರನ್ನು ರಾಜ್ಯಪಾಲರು ಅನುಮೋದಿಸಬೇಕಾಗಿತ್ತು. ಅವರು ನಿರಾಕರಿಸಿದರೆ ಶಿಕ್ಷಣ ಇಲಾಖೆಯು ತನ್ನ ನಿರ್ಧಾರದ ಮೂಲಕ ಮುಂದುವರೆಯುವ ಅಧಿಕಾರ ಹೊಂದಿದೆ ಎಂದು ಪ್ರತಿಪಾದಿಸಿದೆ.

‘ಶಿಕ್ಷಣ ಇಲಾಖೆಗೆ ಕಾನೂನು ಜಾರಿಗೊಳಿಸುವ ಅಧಿಕಾರವಿದೆ, ಕಾನೂನು ರೂಪಿಸುವುದಕ್ಕಲ್ಲ. ಕುಲಾಧಿಪತಿಯ ಅನುಮತಿಯಿಲ್ಲದೆ 25 ವಿಶ್ವವಿದ್ಯಾಲಯಗಳ ಕುಲಪತಿಗಳ ನೇಮಕವಾಗಿದೆ’ ಎಂದು ಧನಕರ್‌ ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.